ವಿದೇಶ

ಪಾಕಿಸ್ತಾನ: ಬಲೂಚಿಸ್ತಾನ ಹೈಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ಮಸೀದಿ ಹೊರಗೆ ಗುಂಡಿಕ್ಕಿ ಹತ್ಯೆ

Sumana Upadhyaya

ಇಸ್ಲಾಮಾಬಾದ್: ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಸೀದಿಯ ಹೊರಗೆ ಗುಂಡಿನ ದಾಳಿಗೆ ನಿನ್ನೆ ಬಲಿಯಾಗಿದ್ದಾರೆ.

ದುಷ್ಕರ್ಮಿಗಳು ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಮುಹಮ್ಮದ್ ನೂರ್ ಮೆಸ್ಕನ್ಝೈ ಅವರನ್ನು ಖಾರನ್ ಪ್ರದೇಶದ ಮಸೀದಿಯ ಹೊರಗೆ ಗುಂಡಿಕ್ಕಿದರು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಖಾರನ್ ಪೊಲೀಸ್ ಸೂಪರಿಂಡೆಂಟ್ ಆಸಿಫ್ ಹಲಿಮ್ ಹೇಳಿದ್ದಾರೆ.

ನ್ಯಾಯಮೂರ್ತಿಗಳ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಬಲೂಚಿಸ್ತಾನ್ ಮುಖ್ಯಮಂತ್ರಿ ಮೀರ್ ಅಬ್ದುಲ್ ಕುದೂಸ್ ಬಿಜೆಂಜೊ ಅವರ ಸೇವೆಗಳು "ಅವಿಸ್ಮರಣೀಯ" ಎಂದು ಹೇಳಿದ್ದಾರೆ. ಶಾಂತಿಯ ಶತ್ರುಗಳ ಹೇಡಿತನದ ದಾಳಿಗಳು ರಾಷ್ಟ್ರವನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಬಿಜೆಂಜೊ ಎಚ್ಚರಿಕೆ ನೀಡಿದ್ದಾರೆ. ಮಸ್ಕಂಜೈ ಅವರು ಷರಿಯಾ ವಿರುದ್ಧ ರಿಬಾ ಆಧಾರಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಘೋಷಿಸುವ ಮಹತ್ವದ ತೀರ್ಪನ್ನು ಬರೆದಿದ್ದಾರೆ.

ಕ್ವೆಟ್ಟಾ ಬಾರ್ ಅಸೋಸಿಯೇಷನ್ (ಕ್ಯೂಬಿಎ) ಅಧ್ಯಕ್ಷ ಅಜ್ಮಲ್ ಖಾನ್ ಕಾಕರ್ ಕೂಡ ಮುಸ್ಕಂಜೈ ಹತ್ಯೆಯನ್ನು ಖಂಡಿಸಿದ್ದಾರೆ. ಮಾಜಿ ನ್ಯಾಯಾಧೀಶರ ಸಾವಿನಿಂದ ಪಾಕಿಸ್ತಾನದ ಪ್ರತಿಯೊಬ್ಬ ನಾಗರಿಕನು ತೀವ್ರ ದುಃಖಿತನಾಗಿದ್ದಾನೆ ಎಂದು ಹೇಳಿದ್ದಾರೆ. ನಾವು ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇವೆ. ಹಂತಕರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಅಜ್ಮಲ್ ಕಾಕರ್ ಹೇಳಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಕಾನೂನು ರಾಜ್ಯ ಸಚಿವ ಶಹದತ್ ಹುಸೇನ್ ಅವರು, ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ತೀವ್ರ ಹೆಚ್ಚಳವಾಗಿದೆ ಎಂದು ಹೇಳಿದ್ದರು.

SCROLL FOR NEXT