ವಿದೇಶ

ಬ್ರಿಟನ್ ರಾಣಿಯ ಅಂತ್ಯಕ್ರಿಯೆ ನಂತರ 7 ದಿನಗಳವರೆಗೆ ಶೋಕಾಚರಣೆ

Nagaraja AB

ಲಂಡನ್: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅಂತ್ಯಕ್ರಿಯೆ ನಂತರ ಏಳು ದಿನಗಳವರೆಗೂ ಶೋಕಾಚರಣೆ ಇರಲಿದೆ ಎಂದು ಬಕ್ಕಿಂಗ್ ಹ್ಯಾಮ್ ಅರಮನೆ ಶುಕ್ರವಾರ ಘೋಷಿಸಿದೆ.

ಎರಡನೇ ಎಲಿಜಬೆತ್ ರಾಣಿ ಯುಕೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ರಾಜವಂಶಸ್ಥೆಯಾಗಿದ್ದು, 70 ವರ್ಷಗಳ ಕಾಲ ಆಳ್ವಿಕೆ ನಡೆಸಿದ ನಂತರ ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ 96ನೇ ವಯಸ್ಸಿನಲ್ಲಿ  ಗುರುವಾರ ನಿಧನರಾದರು. ಬ್ರಿಟನ್ ರಾಣಿಯ ಅಂತ್ಯಕ್ರಿಯೆ ದಿನಾಂಕ ಇನ್ನೂ ಖಚಿತವಾಗಿಲ್ಲ, ಅವರ ಅಂತ್ಯಕ್ರಿಯೆ ನಂತರ ಏಳು ದಿನಗಳವರೆಗೂ ಶೋಕಾಚರಣೆ ನಡೆಸುವುದು ರಾಜನ ಆಶಯವಾಗಿರುತ್ತದೆ ಎಂದು ಬಕ್ಕಿಂಗ್ ಹ್ಯಾಮ್ ಅರಮನೆ ಹೇಳಿಕೆಯಲ್ಲಿ ತಿಳಿಸಿದೆ. 

ಸರ್ಕಾರ ಪ್ರತ್ಯೇಕವಾಗಿ ರಾಷ್ಟ್ರೀಯ ಶೋಕಾಚರಣೆ  ಬಗ್ಗೆ ವಿವರಿಸುವ ನಿರೀಕ್ಷೆಯಿದೆ. ರಾಜಮನೆತನದ ಸದಸ್ಯರು, ರಾಜಮನೆತನದ ಸಿಬ್ಬಂದಿ ಮತ್ತು ರಾಜಮನೆತನದ ಪ್ರತಿನಿಧಿಗಳಿಂದ ಶೋಕಾಚರಣೆ ಆಚರಿಸಲಾಗುತ್ತದೆ. ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ರಾಣಿಯ ಅಂತ್ಯಕ್ರಿಯೆಯು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ನಿಖರವಾದ ದಿನವನ್ನು ಬಕ್ಕಿಂಗ್ ಹ್ಯಾಮ್ ಅರಮನೆ ಖಚಿತಪಡಿಸುತ್ತದೆ ಎಂದು ಬಿಬಿಸಿ ವರದಿ ಮಾಡಿದೆ.

ಶುಕ್ರವಾರ, ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ನಲ್ಲಿ ನಡೆಯಲಿರುವ  ಸ್ಮರಣಾರ್ಥ  ಕಾರ್ಯಕ್ರಮದಲ್ಲಿ  ಪ್ರಧಾನ ಮಂತ್ರಿ ಲಿಜ್ ಟ್ರಸ್ ಮತ್ತು ಇತರ ಹಿರಿಯ ಸಚಿವರು ಭಾಗವಹಿಸುತ್ತಾರೆ. ರಾಣಿಯು ಸ್ಕಾಟ್ಲೆಂಡ್‌ನಲ್ಲಿ ಮರಣಹೊಂದಿದ ಕಾರಣ, ಆಕೆಯ ಶವಪೆಟ್ಟಿಗೆಯನ್ನು ಎಡಿನ್‌ಬರ್ಗ್‌ನ ಸೇಂಟ್ ಗೈಲ್ಸ್ ಕ್ಯಾಥೆಡ್ರಲ್‌ನಲ್ಲಿ ಇರಿಸಲಾಗುತ್ತದೆ.

ಕೆಲವು ದಿನಗಳ ನಂತರ ಶವಪೆಟ್ಟಿಗೆಯನ್ನು ಸಾರ್ವಜನಿಕರು ವೀಕ್ಷಿಸಲು ಅವಕಾಶ ನೀಡಬಹುದು. ನಂತರ ಶವಪೆಟ್ಟಿಗೆಯನ್ನು ಲಂಡನ್‌ಗೆ ಕೊಂಡೊಯ್ಯಲಾಗುವುದು. ಅಲ್ಲಿನ ವೆಸ್ಟ್ ಮಿನಿಸ್ಟರ್ ಹಾಲ್ ನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಸಾವಿರಾರು ಮಂದಿ ರಾಣಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ. ಶುಕ್ರವಾರ ಸಂಸತ್ತಿನ ಜಂಟಿ ಅಧಿವೇಶನವು ರಾಣಿಗೆ ಗೌರವ ಸಲ್ಲಿಸುತ್ತದೆ.

SCROLL FOR NEXT