ವಿದೇಶ

ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಬ್ರಿಟನ್ ರಾಣಿ 2ನೇ ಎಲಿಜಬೆತ್ ಗೆ ಅಂತಿಮ ನಮನ: ಚೀನಾ ನಿಯೋಗಕ್ಕೆ ನಿಷೇಧ

Lingaraj Badiger

ಲಂಡನ್: ಸೆಪ್ಟೆಂಬರ್ 19 ರಂದು ಲಂಡನ್ ನ ವೆಸ್ಟ್‌ಮಿನ್‌ಸ್ಟರ್ ಅಬೆಯಲ್ಲಿ ನಡೆಯುವ ಅಂತ್ಯಕ್ರಿಯೆಗೂ ಮೊದಲು ಸಂಸತ್ತಿನ ಸಂಕೀರ್ಣದೊಳಗಿನ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ನಡೆಯುವ ರಾಣಿ ಎಲಿಜಬೆತ್ ಅವರ ಅಂತಿಮ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲು ಚೀನಾದ ಉನ್ನತ ಮಟ್ಟದ ನಿಯೋಗಕ್ಕೆ ಬ್ರಿಟನ್ ಅನುಮತಿ ನಿರಾಕರಿಸಿದೆ ಎಂದು ಶುಕ್ರವಾರ ಯುಕೆ ಮಾಧ್ಯಮಗಳು ವರದಿ ಮಾಡಿವೆ.

ಹೌಸ್ ಆಫ್ ಕಾಮನ್ಸ್ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಅವರು, ಚೀನಾ ನಿಯೋಗದ ವೆಸ್ಟ್‌ಮಿನಿಸ್ಟರ್ ಹಾಲ್‌ಗೆ ಪ್ರವೇಶಿಸುವ ವಿನಂತಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಕ್ಸಿನ್‌ಜಿಯಾಂಗ್‌ನಲ್ಲಿರುವ ಉಯಿಘರ್ ಮುಸ್ಲಿಮರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದ ಬ್ರಿಟನ್‌ನ ಐವರು ಸಂಸದರ ಮೇಲೆ ಚೀನಾ ನಿರ್ಬಂಧ ವಿಧಿಸಿತ್ತು. ಇದೇ ಕಾರಣಕ್ಕಾಗಿ ಸ್ಪೀಕರ್ ಸರ್ ಲಿಂಡ್ಸೆ ಹೊಯ್ಲ್ ಅವರು ಚೀನಾದ ನಿಯೋಗಕ್ಕೆ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿರುವ ಹೌಸ್ ಆಫ್ ಕಾಮನ್ಸ್, ಚೀನಾವು ರಾಣಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದೆ. ಆದರೆ ಸಂಸತ್ತಿನ ಕಟ್ಟಡಕ್ಕೆ ಅನುಮತಿಸುವುದಿಲ್ಲ  ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ವೆಸ್ಟ್‌ಮಿನಿಸ್ಟರ್ ಹಾಲ್ ಪಾರ್ಲಿಮೆಂಟರಿ ಎಸ್ಟೇಟ್‌ನ ಭಾಗವಾಗಿರುವುದರಿಂದ, ಇದು ಕಾಮನ್ಸ್ ಮತ್ತು ಲಾರ್ಡ್ಸ್ ಸ್ಪೀಕರ್‌ಗಳ ನಿಯಂತ್ರಣದಲ್ಲಿದೆ.

ಈ ಕ್ರಮವು ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಒತ್ತಡಕ್ಕೆ ಒಳಗಾಗಿರುವ ಬ್ರಿಟನ್-ಚೀನಾ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆಯಿದೆ.

ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ, ಅವರ ಬದಲಿಗೆ ಚೀನಾದ ನಿಯೋಗದೊಂದಿಗೆ ಉಪಾಧ್ಯಕ್ಷ ವಾಂಗ್ ಕ್ವಿಶನ್ ಭಾಗವಹಿಸುವ ನಿರೀಕ್ಷೆ ಇದೆ.

SCROLL FOR NEXT