ವಿದೇಶ

ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ: ಕ್ಷಮೆಯಾಚಿಸಲು ನ್ಯಾಯಾಲಯಕ್ಕೆ ಬಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

Ramyashree GN

ಇಸ್ಲಾಮಾಬಾದ್: ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ಬೆದರಿಕೆಯೊಡ್ಡಿದ್ದ ಮಹಿಳಾ ನ್ಯಾಯಾಧೀಶರಾದ ಝೀಬಾ ಚೌಧರಿ ಅವರಿಗೆ ಖುದ್ದಾಗಿ ಕ್ಷಮೆಯಾಚಿಸಲು ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಇಲ್ಲಿನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಆ. 20 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ, ದೇಶದ್ರೋಹದ ಆರೋಪದ ಮೇಲೆ ತನ್ನ ಸಹಾಯಕ ಶಹಬಾಜ್ ಗಿಲ್‌ರನ್ನು ಬಂಧಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳು, ಚುನಾವಣಾ ಆಯೋಗ ಮತ್ತು ರಾಜಕೀಯ ವಿರೋಧಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು.

ಕ್ಯಾಪಿಟಲ್ ಟೆರಿಟರಿ ಪೊಲೀಸರ ಕೋರಿಕೆಯ ಮೇರೆಗೆ ಗಿಲ್ ಅವರ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಝೀಬಾ ಚೌಧರಿ ಅವರ ವಿರುದ್ಧ ವಾಗ್ಧಾಳಿ ನಡೆಸಿದ್ದ ಅವರು, 'ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ, ಆಕೆ ಸ್ವತಃ ಸಿದ್ಧರಾಗಿಬೇಕು' ಎಂದು ಹೇಳಿದ್ದರು.

ಭಾಷಣದ ಕೆಲವೇ ಗಂಟೆಗಳ ನಂತರ, 69 ವರ್ಷದ ಇಮ್ರಾನ್ ಖಾನ್ ಅವರ ವಿರುದ್ಧ ಸಾರ್ವಜನಿಕವಾಗಿ ಪೊಲೀಸರು, ನ್ಯಾಯಾಂಗ ಮತ್ತು ಇತರ ರಾಜ್ಯ ಸಂಸ್ಥೆಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇಸ್ಲಮಾಬಾದ್ ಹೈಕೋರ್ಟ್ ಅವರ ವಿರುದ್ಧ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿತ್ತು.

ನ್ಯಾಯಾಧೀಶರಿಗೆ ಬೆದರಿಕೆ ಹಾಕುವ ಉದ್ದೇಶ ಹೊಂದಿರಲಿಲ್ಲ ಮತ್ತು ಖುದ್ದು ಭೇಟಿಯಾಗಿ ಕ್ಷಮೆಯಾಚಿಸಲು ಸಿದ್ಧನಿದ್ದೇನೆ ಎಂದು ಖಾನ್ ನಂತರ ಹೇಳಿದ್ದರು.

ಈಮಧ್ಯೆ, ಖಾನ್ ಅವರು ತನ್ನ ವಕೀಲರೊಂದಿಗೆ ನ್ಯಾಯಾಧೀಶೆ ಚೌಧರಿ ಅವರಿರುವ ನ್ಯಾಯಾಲಯಕ್ಕೆ ಹಾಜರಾದರು. ಆದರೆ, ನ್ಯಾಯಾಧೀಶರು ರಜೆಯಲ್ಲಿರುವುದಾಗಿ ನ್ಯಾಯಾಲಯದ ಗುಮಾಸ್ತರು ಮಾಹಿತಿ ನೀಡಿದರು.

'ನಾನು ನ್ಯಾಯಾಧೀಶರಾದ ಝೀಬಾ ಚೌಧರಿ ಅವರಲ್ಲಿ ಕ್ಷಮೆಯಾಚಿಸಲು ಬಂದಿದ್ದೇನೆ, 'ಮೇಡಂ ಝೀಬಾ ಚೌಧರಿ ಅವರಿಗೆ ನೀವು ಹೇಳಬೇಕು, ಇಮ್ರಾನ್ ಖಾನ್ ಅವರು ಭೇಟಿ ನೀಡಿದ್ದರು ಮತ್ತು ಅವರ ಮಾತುಗಳಿಂದ ನೋವಾಗಿದ್ದರೆ ಕ್ಷಮೆಯಾಚಿಸಲು ಬಯಸುತ್ತೇನೆ' ಎಂದು ಕೋರ್ಟ್ ರೀಡರ್‌ಗೆ ಪಿಟಿಐ ಪಕ್ಷದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಲಾಗಿದೆ.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಖಾನ್ ಅವರ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಲಾಗಿದ್ದು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಚೌಧರಿಗೆ ಕ್ಷಮೆಯಾಚಿಸಲು ಸೆಷನ್ಸ್ ನ್ಯಾಯಾಲಯಕ್ಕೆ ಅವರ ಭೇಟಿಯಿಂದ ನ್ಯಾಯಾಲಯವು ತೃಪ್ತವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

SCROLL FOR NEXT