ವಿದೇಶ

ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ; ತಪ್ಪಿದ ದುರಂತ, ಸುರಕ್ಷಿತ ಪ್ರದೇಶಕ್ಕೆ ಫುಮಿಯೊ ಕಿಶಿಡಾ ಸ್ಥಳಾಂತರ

Manjula VN

ಟೋಕಿಯೋ: ಜಪಾನ್ ರಾಷ್ಟ್ರದ ಪ್ರಧಾನಮಂತ್ರಿ ಫ್ಯೂಮಿಯೋ ಕಿಶಿಡಾ ಅವರು ಭಾಷಣ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿರುವುದಾಗಿ ವರದಿಗಳಿಂದ ತಿಳಿದುಬಂದಿದೆ.

ಪಶ್ಚಿಮ ಜಪಾನ್‌ನ ವಕಯಾಮಾದಲ್ಲಿ ಕಿಶಿಡಾ ಭಾಷಣ ಮಾಡುತ್ತಿದ್ದರು. ಈ ವೇಳೆ ಪ್ರಧಾನಿಯೆಡೆಗೆ ಸ್ಫೋಟಕ ವಸ್ತುವನ್ನು ಎಸೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

ಕೂಡಲೇ ಕಿಶಿಡಾ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸರು ನಿರಾಕರಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಪ್ರಧಾನಿ ಭಾಷಣ ಮಾಡುತ್ತಿದ್ದ ವೇಳೆ ಅನುಮಾನಾಸ್ಪದ ವಸ್ತುವನ್ನು ಅವರೆಡೆಗೆ ಎಸೆಯಲಾಗಿದೆ. ಈ ವೇಳೆ ಸ್ಥಳದಲ್ಲಿ ಹೊಗೆ ಕಾಣಿಸಿಕೊಂಡಿದೆ. ಸದ್ಯ ಘಟನಾ ಸ್ಥಳದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಧಿಕಾರಿಗಳು ಸ್ಥಳದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಕಳೆದ ವರ್ಷ ಜುಲೈನಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ಮಾಜಿ ಪ್ರಧಾನಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.

SCROLL FOR NEXT