ವಿದೇಶ

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 10 ರೂ. ಹೆಚ್ಚಳ

Lingaraj Badiger

ಇಸ್ಲಾಮಾಬಾದ್: ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಕರೆನ್ಸಿ ಅಪಮೌಲ್ಯದ ನಡುವೆ ನಗದು ಕೊರತೆ ಎದುರಿಸುತ್ತಿರುವ ಪಾಕಿಸ್ತಾನ, ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 10 ರೂಪಾಯಿ ಹೆಚ್ಚಿಸಿದೆ. ಈ ಮೂಲಕ ಈಗಾಗಲೇ ಗಗನಕ್ಕೇರುತ್ತಿರುವ ಹಣದುಬ್ಬರದಿಂದ ಕಂಗೆಟ್ಟಿರುವ ದೇಶದ ನಾಗರಿಕರಿಗೆ ಮತ್ತೊಂದು ಶಾಕ್ ನೀಡಿದೆ.

ಲೀಟರ್ ಗೆ 10 ರೂಪಾಯಿ ಹೆಚ್ಚಳದೊಂದಿಗೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 282 ರೂ.ಗೆ ಏರಿಕೆಯಾಗಿದೆ.

ಹಣಕಾಸು ಸಚಿವ ಇಶಾಕ್ ದಾರ್ ಅವರು ತಡರಾತ್ರಿಯ ನೇರ ಭಾಷಣದಲ್ಲಿ ಪೆಟ್ರೋಲ್ ದರ ಏರಿಕೆಯನ್ನು ಘೋಷಿಸಿದ್ದಾರೆ. ಆದರೆ ಡೀಸೆಲ್ ಮತ್ತು ಲಘು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ. ಡೀಸೆಲ್ 293 ರೂ. ಮತ್ತು ಲಘು ಡೀಸೆಲ್ 174.68 ರೂ. ಇರುತ್ತದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಸರ್ಕಾರ ಸೀಮೆಎಣ್ಣೆ ಬೆಲೆಯೂ ಪ್ರತಿ ಲೀಟರ್ 5.78 ರೂಪಾಯಿ ಏರಿಕೆ ಮಾಡಿದ್ದು, ಇದರೊಂದಿಗೆ 186.07 ರೂಪಾಯಿಗೆ ತಲುಪಿದೆ.

"ಹೊಸ ಬೆಲೆಗಳು ಭಾನುವಾರ(ಏಪ್ರಿಲ್ 16) ಮಧ್ಯ ರಾತ್ರಿಯಿಂದಲೇ ಜಾರಿಗೆ ಬರಲಿವೆ" ಎಂದು ಪಾಕ್ ಹಣಕಾಸು ಸಚಿವರು ಹೇಳಿದ್ದಾರೆ.

ಕಳೆದ 15 ದಿನಗಳಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಾಗಿರುವುದರಿಂದ ಈ ಪರಿಷ್ಕರಣೆ ಅಗತ್ಯವೆಂದು ದಾರ್ ತಿಳಿಸಿದ್ದಾರೆ.

SCROLL FOR NEXT