ವಿದೇಶ

ಮುಂದಿನ ದಿನಗಳಲ್ಲಿ, ಭಾರತ ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ: ಬ್ರಿಕ್ಸ್ ನಲ್ಲಿ ಪ್ರಧಾನಿ ಮೋದಿ

Lingaraj Badiger

ಜೋಹಾನ್ಸ್‌ಬರ್ಗ್: ಭಾರತ ಕೈಗೊಂಡಿರುವ ಆರ್ಥಿಕ ಸುಧಾರಣೆಗಳು ಮತ್ತು ತಾಂತ್ರಿಕ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ವರ್ಷಗಳಲ್ಲಿ ಭಾರತ ವಿಶ್ವದ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮಲಿದೆ ಎಂದು ಮಂಗಳವಾರ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಬಿಸಿನೆಸ್ ಫೋರಂನಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಭಾರತೀಯರು ಸಂಕಲ್ಪ ಮಾಡಿದ್ದಾರೆ ಎಂದರು.

ಇದೇ ವೇಳೆ, ಹತ್ತನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಬ್ರಿಕ್ಸ್ ಬ್ಯುಸಿನೆಸ್ ಕೌನ್ಸಿಲ್ ಅನ್ನು ಅಭಿನಂದಿಸಿದ ಪ್ರಧಾನಿ ಮೋದಿ, ನಮ್ಮ ಆರ್ಥಿಕ ಸಹಕಾರವನ್ನು ಹೆಚ್ಚಿಸುವಲ್ಲಿ ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

"ಹತ್ತನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಬ್ರಿಕ್ಸ್ ಬ್ಯುಸಿನೆಸ್ ಕೌನ್ಸಿಲ್ ಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಕಳೆದ ಹತ್ತು ವರ್ಷಗಳಲ್ಲಿ, ಬ್ರಿಕ್ಸ್ ಬ್ಯುಸಿನೆಸ್ ಕೌನ್ಸಿಲ್ ನಮ್ಮ ಆರ್ಥಿಕ ಸಹಕಾರವನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದೆ. ಮೊದಲ ಬ್ರಿಕ್ಸ್ ಶೃಂಗಸಭೆಯು 2009 ರಲ್ಲಿ ನಡೆದಾಗ, ವಿಶ್ವವು ಬೃಹತ್ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುತ್ತಿತ್ತು, ಆ ಸಮಯದಲ್ಲಿ ಬ್ರಿಕ್ಸ್ ಜಾಗತಿಕ ಆರ್ಥಿಕತೆಯ ಭರವಸೆಯ ಕಿರಣವಾಗಿ ಹೊರಹೊಮ್ಮಿತು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

"ಪ್ರಸ್ತುತ ಸಹ ಕೋವಿಡ್ ಸಾಂಕ್ರಾಮಿಕ ಉದ್ವಿಗ್ನತೆ ಮತ್ತು ಸಂಕಷ್ಟಗಳ ನಡುವೆ ಜಗತ್ತು ಇ-ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. ಅಂತಹ ಸಮಯದಲ್ಲಿ ಮತ್ತೊಮ್ಮೆ BRICS ದೇಶಗಳ ಪಾತ್ರ ಅತ್ಯಂತ ಮುಖ್ಯವಾಗಿದೆ" ಎಂದಿದ್ದಾರೆ.

ಭಾರತವು ಶೀಘ್ರದಲ್ಲೇ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಮತ್ತು ಮುಂಬರುವ ವರ್ಷಗಳಲ್ಲಿ ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

SCROLL FOR NEXT