ವಿದೇಶ

ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ: ರಕ್ಷಣಾ ಸಚಿವರ ಘೋಷಣೆ

Srinivas Rao BV

ನವದೆಹಲಿ: ಪಾಕಿಸ್ತಾನ ದಿವಾಳಿಯಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವ ಖಾವಾಜಾ ಆಸೀಫ್ ಹೇಳಿದ್ದಾರೆ. 

ಪಾಕಿಸ್ತಾನದ ಇಂದಿನ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಖಾವಾಜಾ ಹೊಣೆಗಾರರನ್ನಾಗಿ ದೂಷಿಸಿದ್ದಾರೆ. 

ಸಿಯಾಲ್ ಕೋಟ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಖಾವಾಜಾ, ತನ್ನನ್ನು ತಾನು ಸ್ಥಿರಪಡಿಸಿಕೊಳ್ಳಲು ತನ್ನ ಕಾಲಮೇಲೆ ನಿಂತುಕೊಳ್ಳುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಪಾಕಿಸ್ತಾನ ದಿವಾಳಿಯಾಗುತ್ತದೆ ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ, ಅದರೆ ಪಾಕಿಸ್ತಾನ ಈಗಾಗಲೇ  ದಿವಾಳಿಯಾಗಿ ಆಗಿದೆ. ನಾವು ದಿವಾಳಿಯಾಗಿರುವ ದೇಶದಲ್ಲೇ ವಾಸಿಸುತ್ತಿದ್ದೇವೆ ಎಂದು ಸಚಿವ ಖಾವಾಜ ಹೇಳಿರುವುದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. 

ನಮ್ಮ ಸಮಸ್ಯೆಗೆ ನಮ್ಮ ದೇಶದಲ್ಲೇ ಪರಿಹಾರಗಳಿವೆ. ಪಾಕಿಸ್ತಾನದ ಸಮಸ್ಯೆಗಳಿಗೆ ಐಎಂಎಫ್ ಬಳಿ ಪರಿಹಾರವಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಕಾನೂನು ಮತ್ತು ಸಂವಿಧಾನವನ್ನು ಪಾಕಿಸ್ತಾನದಲ್ಲಿ ಪಾಲಿಸದ ಕಾರಣ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಪಾಕಿಸ್ತಾನದ ಈ ಸ್ಥಿತಿಗೆ ಕಾರಣ ಎಂದು ಖಾವಾಜ ಅಭಿಪ್ರಾಯಪಟ್ಟಿದ್ದಾರೆ.

ತಾವು ತಮ್ಮ ಬಹುತೇಕ ಸಮಯವನ್ನು ವಿಪಕ್ಷದಲ್ಲಿ ಕಳೆದಿದ್ದು, ರಾಜಕಾರಣ ಕಳೆದ 32 ವರ್ಷಗಳಿಂದ ಅವಮಾನಕಾರಿಯಾಗಿರುವುದಕ್ಕೆ ತಾವು ಸಾಕ್ಷಿಯಾಗಿರುವುದಾಗಿ ಹೇಳಿದ್ದಾರೆ. ಈ ಹಿಂದಿನ ಸರ್ಕಾರದ ವಿರುದ್ಧ ಅಸೀಫ್ ತೀವ್ರ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನಕ್ಕೆ ಭಯೋತ್ಪಾದಕರನ್ನು 2 ವರೆ ವರ್ಷಗಳ ಹಿಂದೆ ಕರೆತರಲಾಗಿತ್ತು ಅದೇ ಇಂದಿನ ಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ. 

SCROLL FOR NEXT