ವಿದೇಶ

ಪಾಕಿಸ್ತಾನ: ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸ್ಫೋಟ; 4 ಮಂದಿ ಸಾವು, 10 ಮಂದಿಗೆ ಗಾಯ

Ramyashree GN

ಪೇಶಾವರ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಾರುಕಟ್ಟೆಯೊಂದರಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರ್ಖಾನ್ ಡೆಪ್ಯುಟಿ ಕಮಿಷನರ್ ಅಬ್ದುಲ್ಲಾ ಖೋಸೊ ಡಾನ್ ಪತ್ರಿಕೆಗೆ, ರಖ್ನಿ ಮಾರುಕಟ್ಟೆ ಪ್ರದೇಶದಲ್ಲಿ ಮೋಟಾರ್ ಸೈಕಲ್‌ನಲ್ಲಿ ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಾಗ ಸ್ಫೋಟ ಸಂಭವಿಸಿದೆ ಎಂದು ಹೇಳಿದರು.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ತಂಡವು ಭೇಟಿ ನೀಡಿದ್ದು, ಹೆಚ್ಚಿನ ತನಿಖೆಗಾಗಿ ಪ್ರದೇಶವನ್ನು ಸುತ್ತುವರಿದಿದೆ ಎಂದು ಬರ್ಖಾನ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸಜ್ಜದ್ ಅಫ್ಜಲ್ ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿನ ವಿಡಿಯೋದಲ್ಲಿ, ಪೊಲೀಸರಿಂದ ಪರಿಶೀಲನೆ, ರಕ್ಷಣಾ ತಂಡ ರಕ್ತಸಿಕ್ತ ಸಂತ್ರಸ್ತರನ್ನು ಒಯ್ಯುತ್ತಿರುವುದನ್ನು ಕಾಣಬಹುದು. ಚೆಲ್ಲಾಪಿಲ್ಲಿಯಾಗಿರುವ ದ್ವಿಚಕ್ರವಾಹನಗಳು ಮತ್ತು ಸುಟ್ಟ ತರಕಾರಿಗಳು ರಸ್ತೆಯ ಮೇಲೆ ಹರಡಿಕೊಂಡಿರುವುದನ್ನು ಕಾಣಬಹುದು.

ಬಲೂಚಿಸ್ತಾನದ ಮುಖ್ಯಮಂತ್ರಿ ಮೀರ್ ಅಬ್ದುಲ್ ಖುದೂಸ್ ಬಿಜೆಂಜೊ ಅವರು ಸ್ಫೋಟವನ್ನು ಖಂಡಿಸಿದ್ದಾರೆ ಮತ್ತು ಅಪರಾಧಿಗಳನ್ನು ಬಂಧಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಮಾಯಕರ ರಕ್ತ ಸುರಿಸುವವರು ಮಾನವೀಯತೆಯ ವೈರಿಗಳು ಎಂದು ಹೇಳಿದರು.

ಭಯೋತ್ಪಾದಕರು ತಮ್ಮ ದುಷ್ಟ ಗುರಿಗಳನ್ನು ಸಾಧಿಸಲು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದ್ದಾರೆ. ಆದರೆ, ನಾವು ರಾಜ್ಯ ವಿರೋಧಿ ಅಂಶಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ.  ಸರ್ಕಾರವು ಪರಿಣಾಮಕಾರಿ ಭಯೋತ್ಪಾದನಾ ನಿಗ್ರಹ ತಂತ್ರವನ್ನು ಅಳವಡಿಸಿಕೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸಲು ಬಿಜೆಂಜೊ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು.

ಬಲೂಚಿಸ್ತಾನ ಪ್ರಾಂತ್ಯವು ಇತ್ತೀಚಿನ ತಿಂಗಳುಗಳಲ್ಲಿ ಬಾಂಬ್ ಸ್ಫೋಟಗಳು ಮತ್ತು ಉದ್ದೇಶಿತ ದಾಳಿಗಳು ಸೇರಿದಂತೆ ಹಿಂಸಾತ್ಮಕ ಘಟನೆಗಳ ಹೆಚ್ಚಳವನ್ನು ಕಾಣುತ್ತಿದೆ. 

ಈಮಧ್ಯೆ, ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಸ್ಫೋಟವನ್ನು ಖಂಡಿಸಿದ್ದಾರೆ ಮತ್ತು ಮುಖ್ಯಮಂತ್ರಿಯಿಂದ ವರದಿ ಕೇಳಿದ್ದಾರೆ.

SCROLL FOR NEXT