ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು ಆಹಾರಕ್ಕೂ ತತ್ವಾರ ಎದುರಾಗಿದೆ. ಇಂಥಹ ಸ್ಥಿತಿಯಲ್ಲಿ ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಕ್ಷ ಪಾಕಿಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಹಳೆಯ ವೀಡಿಯೋ ಒಂದನ್ನು ವೈರಲ್ ಮಾಡಿದೆ.
ಪಾಕ್ ನಲ್ಲಿ ಪ್ರಧಾನಿ ಮೋದಿ ಅವರ ವೀಡಿಯೋ ಟ್ರೆಂಡ್ ಆಗತೊಡಗಿದ್ದು, ಈ ವೀಡಿಯೋವನ್ನು ಆಡಳಿತಾರೂಢ ಶೆಹಬಾಜ್ ಶರೀಫ್ ನೇತೃತ್ವದ ಸರ್ಕಾರವನ್ನು ಟೀಕಿಸಲು ಇಮ್ರಾನ್ ಖಾನ್ ಸರ್ಕಾರ ಅಸ್ತ್ರವಾಗಿ ಬಳಸಿಕೊಳ್ಳತೊಡಗಿದೆ.
ಪಾಕಿಸ್ತಾನದಲ್ಲಿ ವೈರಲ್ ಆಗುತ್ತಿರುವ ಮೋದಿಯ ಭಾಷಣ ಇದಾಗಿದ್ದು,
2019 ರ ಸಾರ್ವತ್ರಿಕ ಚುನಾವಣೆ ವೇಳೆ ರಾಜಸ್ಥಾನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನಾವು ಪಾಕಿಸ್ತಾನದ ಅಹಂಕಾರವನ್ನು ಮುರಿದಿದ್ದೇವೆ. ಅವರು ಜಾಗತಿಕ ಸಮುದಾಯದ ಎದುರು ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡಿದ್ದೇವೆ ಎಂದು ಹೇಳಿದ್ದರು.
ಇದಷ್ಟೇ ಅಲ್ಲದೇ ಭಾರತಕ್ಕೆ ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಯ ಬಗ್ಗೆಯೂ ಮಾತನಾಡಿದ್ದ ಪ್ರಧಾನಿ ಮೋದಿ, ನಾವು ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ಹೆದರುವುದನ್ನು ನಿಲ್ಲಿಸಿದ್ದೇವೆ. ಅವರ ಬಳಿ ಅಣ್ವಸ್ತ್ರ ಶಸ್ತ್ರಾಸ್ತ್ರಗಳು ಇದ್ದರೆ, ನಮ್ಮದೇನು ದೀಪಾವಳಿಗಾಗಿ ಇಟ್ಟಿದ್ದೇವೆಯೇ? ಎಂದು ಪ್ರಶ್ನಿಸಿದ್ದರು.
ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ದಿವಾಳಿಯಾಗುವ ಅಂಚಿನಲ್ಲಿದ್ದು, ಪಿಟಿಐ ಬೆಂಬಲಿಗರು ಪಾಕ್ ಆರ್ಥಿಕತೆಯನ್ನು ಸರಿದಾರಿಗೆ ತರಲಾಗದ ಶೆಹಬಾಜ್ ಷರೀಫ್ ಸರ್ಕಾರವನ್ನು ಟೀಕಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಭಾಷಣದ ವಿಡಿಯೋವನ್ನು ವೈರಲ್ ಮಾಡತೊಡಗಿದ್ದಾರೆ.
ವಿಚಿತ್ರ ಎಂದರೆ ಪ್ರಧಾನಿ ನರೇಂದ್ರ ಮೋದಿ ಈ ರೀತಿಯ ಹೇಳಿಕೆ ನೀಡಿದಾಗ ಆಡಳಿತದಲ್ಲಿದ್ದದ್ದು ಇಮ್ರಾನ್ ಖಾನ್ ಅವರ ಸರ್ಕಾರವೇ ಆಗಿತ್ತು.