ವಿದೇಶ

ಜೋ- ಬೈಡನ್ ಕುಟುಂಬದಿಂದ ಪ್ರಧಾನಿ ಮೋದಿಗೆ ಔತಣಕೂಟ ಆಯೋಜನೆ!

Nagaraja AB

ವಾಷಿಂಗ್ಟನ್: ಅಮೆರಿಕದ ಶ್ವೇತಭವನದಲ್ಲಿ ಆಯೋಜನೆಯಾಗಿರುವ ಸ್ಟೇಟ್  ಡಿನ್ನರ್ ಗೂ ಮುನ್ನಾ ಜೂನ್ 21 ರಂದು ಪ್ರಧಾನಿ ನರೇಂದ್ರ ಮೋದಿಗೆ  ಔತಣಕೂಟ ಆಯೋಜಿಸಲು ಅಮೆರಿಕ ಅಧ್ಯಕ್ಷ ಜೋ-ಬೈಡನ್ ಕುಟುಂಬ ಯೋಜಿಸುತ್ತಿದೆ ಎಂದು ಹಿರಿಯ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಜೋ- ಬೈಡನ್ ಹಾಗೂ ಪ್ರಥಮ ಮಹಿಳೆ ಜಿಲ್ ಬೈಡನ್  ಅವರು ಅಧಿಕೃತ ರಾಜ್ಯ ಭೇಟಿಗೆ ಆಹ್ವಾನಿಸಿದ್ದಾರೆ.

ಈ  ಐತಿಹಾಸಿಕ ಭೇಟಿ ವೇಳೆಯಲ್ಲಿ ಇತರ ವಿಷಯಗಳ ಜೊತೆಗೆ ಜೂನ್ 22 ರಂದು ಸೌತ್ ಲಾನ್ಸ್‌ನಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ಸಮಾರಂಭ ಸೇರಿದಂತೆ  ಅತ್ಯುತ್ತಮ ಮನೋರಂಜನೆಯೊಂದಿಗೆ ಸ್ಟೇಟ್ ಡಿನ್ನರ್ ಆಯೋಜಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಶ್ವೇತಭವನದ ಹುಲ್ಲುಹಾಸಿನ ಮೇಲೆ ನಡೆಯಲಿರುವ ಸಮಾರಂಭದಲ್ಲಿ ಕೆಲವೇ ಮಂದಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭಕ್ಕೂ ಮುನ್ನಾ ಪ್ರಧಾನಿ ಮೋದಿ ಮತ್ತು ಜೋ-ಬೈಡನ್ ಮತ್ತು ಅವರ ಕುಟುಂಬದೊಂದಿಗೆ ಕೆಲ ಕ್ಷಣಗಳನ್ನು ಕಳೆಯಲಿದ್ದಾರೆ ಎಂದು ಅವರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಔತಣಕೂಟದ ಮೆನು ವಿವರ ತಿಳಿದುಬಂದಿಲ್ಲ. ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಜೂನ್ 21 ರಂದು ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್ ಡಿಸಿಗೆ ಆಗಮಿಸುವ ನಿರೀಕ್ಷೆಯಿದೆ. ಜೂನ್ 22 ರಂದು ಸ್ಟೇಟ್ ಡಿನ್ನರ್ ಆಯೋಜಿಸಲಾಗಿದೆ. ಅಂದು ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಗಣ್ಯರ ಪಟ್ಟಿ ಬಿಡುಗಡೆಯಾಗಲಿದೆ. 

SCROLL FOR NEXT