ವಿಶ್ವಸಂಸ್ಥೆ: ಪಾಕ್ ಮೂಲದ ಭಯೋತ್ಪಾದಕ ಸಜಿದ್ ಮಿರ್ ನ್ನು ವಿಶ್ವಸಂಸ್ಥೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸುವ ಭಾರತದ ಯತ್ನಕ್ಕೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ.
ಸಜಿದ್ ಮಿರ್ 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾಗಿದ್ದ. ಈತನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಭಾರತ ಪ್ರಸ್ತಾವನೆ ಸಲ್ಲಿಸಿತ್ತು.
ಆದರೆ ಅಮೇರಿಕಾ ಹಾಗೂ ಭಾರತ ಮಂಡಿಸಿದ್ದ ಈ ಪ್ರಸ್ತಾವನೆಗೆ ಚೀನಾ ತಡೆಯೊಡ್ಡಿದೆ. ಮಿರ್ ನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಅಲ್ ಖೈದಾ ನಿರ್ಬಂಧ ಸಮಿತಿಯಡಿಯಲ್ಲಿ ಜಾಗತಿಕ ಭಯೋತ್ಪಾದಕನೆಂದು ಘೋಷಿಸಬೇಕು ಹಾಗೂ ಅವನನ್ನು ಸ್ವತ್ತುಗಳ ನಿರ್ಬಂಧ, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಡಿಸಬೇಕೆಂದು ಪ್ರಸ್ತಾವನೆಯಲ್ಲಿ ಮಂಡಿಸಲಾಗಿತ್ತು.
ಇದನ್ನೂ ಓದಿ: ಪಾಕಿಸ್ತಾನದ ಪಂಜಾಬ್‌ನಲ್ಲಿ ಚೀನಾ ಅಣುಸ್ಥಾವರ ನಿರ್ಮಾಣ!
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿಯೂ ಸಹ ಚೀನಾ ಮಿರ್ ನ್ನು ಜಾಗತಿಕ ಭಯೋತ್ಪಾದಕನನ್ನಾಗಿ ಘೋಷಣೆ ಮಾಡುವುದಕ್ಕೆ ತಡೆಯೊಡ್ಡಿತ್ತು.
ಭಾರತಕ್ಕೆ ಬೇಕಿರುವ ಮಿರ್ ಎಂಬ ಭಯೋತ್ಪಾದಕನ ತಲೆಗೆ 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಲಾಗಿದೆ. ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ಕೋರ್ಟ್, ಉಗ್ರವಾದಕ್ಕೆ ಆರ್ಥಿಕ ನೆರವು ನೀಡುವ ಆರೋಪದ ಹಿನ್ನೆಲೆಯಲ್ಲಿ ಮಿರ್ ಗೆ ಜೂನ್ ನಲ್ಲಿ 15 ರಂದು 15 ವರ್ಷ ಜೈಲು ಶಿಕ್ಷೆ ಘೋಷಿಸಿತ್ತು.