ವಿದೇಶ

'ಯಾವತ್ತೂ ನನ್ನ ದೇಶದ ಗೌರವಕ್ಕೆ ಧಕ್ಕೆ ತಂದಿಲ್ಲ': ಬ್ರಿಟನ್ ನಲ್ಲಿ ರಾಹುಲ್ ಗಾಂಧಿ

Lingaraj Badiger

ಲಂಡನ್: ನಾನು ಯಾವತ್ತೂ ವಿದೇಶಿ ನೆಲದಲ್ಲಿ ನನ್ನ ದೇಶದ ಗೌರವಕ್ಕೆ ಧಕ್ಕೆ ತಂದಿಲ್ಲ. ಬಿಜೆಪಿ ನನ್ನ ಹೇಳಿಕೆಗಳನ್ನು ತಿರುಚುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಾವು ಮಾಡಿದ ಭಾಷಣವನ್ನು ಟೀಕಿಸುತ್ತಿರುವ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಶನಿವಾರ ಲಂಡನ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, “ನಾನು ಎಂದಿಗೂ ನನ್ನ ದೇಶದ ಗೌರವಕ್ಕೆ ಧಕ್ಕೆ ತಂದಿಲ್ಲ. ದೇಶಕ್ಕೆ ಅವಮಾನ ಆಗುವಂತೆ ಎಂದೂ ನಡೆದುಕೊಂಡಿಲ್ಲ. ನನ್ನ ಮಾತುಗಳನ್ನು ಬಿಜೆಪಿ ತಿರುಚುತ್ತಿದೆ ಎಂದರು. ಪ್ರಧಾನಿ ಮೋದಿ ವಿದೇಶಕ್ಕೆ ಹೋದಾಗಲೆಲ್ಲ ಭಾರತದ ಗೌರವಕ್ಕೆ ಧಕ್ಕೆ ಆಗಿದೆ. ಕಳೆದ 10 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ. ಆ 10 ವರ್ಷಗಳಲ್ಲಿ ಭಾರತವನ್ನು ಕಟ್ಟಿದ, ದೇಶಕ್ಕಾಗಿ ದುಡಿದ ಜನರನ್ನು ಅವಮಾನಿಲ್ಲವೇ? ಎಂದು ಪ್ರಶ್ನಿಸಿದರು.

ಒಂದು ವಾರದ ಬ್ರಿಟನ್ ಭೇಟಿಯ ಭಾಗವಾಗಿ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿದ್ದಾರೆ, ದೆಹಲಿ ಮತ್ತು ಮುಂಬೈ ಬಿಬಿಸಿ ಕಚೇರಿಗಳಲ್ಲಿ ಐಟಿ ದಾಳಿ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ, ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವುದಕ್ಕೆ ಉದಾಹರಣೆಯಾಗಿದೆ" ಎಂದು ಹೇಳಿದರು.

“ಬಿಬಿಸಿ ಮೇಲೆ ಈಗ ದಾಳಿ ಆಗಿದೆ. ಆದರೆ ಇದು ಕಳೆದ ಒಂಬತ್ತು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿದೆ. ಸರ್ಕಾರದ ಪರವಾಗಿ ನಿಲ್ಲುವ ಪತ್ರಕರ್ತರಿಗೆ ಪುರಸ್ಕಾರ ನೀಡಲಾಗುತ್ತಿದೆ. ಬಿಬಿಸಿ ಸಹ ಸರ್ಕಾರದ ವಿರುದ್ಧ ಬರೆಯುವುದನ್ನು ನಿಲ್ಲಿಸಿದರೆ, ಎಲ್ಲಾ ಪ್ರಕರಣಗಳನ್ನು ಹಿಂಪಡೆಯುತ್ತಾರೆ. ಎಲ್ಲವೂ ಸಹಜ ಸ್ಥಿತಿಗೆ ಬರುತ್ತದೆ ಎಂದರು.

ಮಾಧ್ಯಮ, ಸಾಂಸ್ಥಿಕ ಸಂಸ್ಥೆಗಳು, ನ್ಯಾಯಾಂಗ, ಸಂಸತ್ತು ಎಲ್ಲದರ ಮೇಲೂ ಈಗ ದಾಳಿ ನಡೆಯುತ್ತಿದೆ. ಟಿವಿ ವಾಹಿನಿಗಳಲ್ಲಿ ಜನರ ಧ್ವನಿಗಳಿಗೆ ಅವಕಾಶ ಸಿಗುವುದು ಕಷ್ಟವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

SCROLL FOR NEXT