ಲಂಡನ್: ಬಿಜೆಪಿ ತಾನು ಶಾಶ್ವತವಾಗಿ ಅಧಿಕಾರದಲ್ಲಿರುತ್ತೇನೆ ಎಂಬ ಭ್ರಮೆಯಲ್ಲಿದೆ. ಆದರೆ ಅದು ಸಾಧ್ಯವಿಲ್ಲ. ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳ ಉಳಿವಿಗಾಗಿ ಎಲ್ಲಾ ಪ್ರತಿಪಕ್ಷಗಳು ಒಂದಾಗಲಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಲಂಡನ್‌ನ ಚಥಮ್ ಹೌಸ್ ಥಿಂಕ್ ಟ್ಯಾಂಕ್‌ನಲ್ಲಿ ಸೋಮವಾರ ಸಂಜೆ ನಡೆದ ಸಂವಾದದಲ್ಲಿ ಮಾತನಾಡಿದ ವಯನಾಡು ಸಂಸದ ರಾಹುಲ್ ಗಾಂಧಿ, ದೇಶದಲ್ಲಿ ಭಿನ್ನಾಭಿಪ್ರಾಯ ಹತ್ತಿಕ್ಕುವ ಯತ್ನ ನಡೆಯುತ್ತಿದ್ದು, ಇಸ್ರೇಲಿ ಸಾಫ್ಟ್‌ವೇರ್ ಪೆಗಾಸಸ್ ಅನ್ನು ತಮ್ಮ ಫೋನ್‌ನಲ್ಲಿ ಹಾಕಲಾಗಿದೆ ಎಂದು ಮತ್ತೊಮ್ಮೆ ಆರೋಪಿಸಿದರು.
ಇದನ್ನು ಓದಿ: ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವ, ರಾಜಕೀಯ, ಸಂಸದೀಯ ವ್ಯವಸ್ಥೆಯನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ: ಬಿಜೆಪಿ
"ಅಧಿಕಾರದ ದೃಷ್ಟಿಕೋನದಲ್ಲಿ ಹೇಳುವುದಾದರೆ, ಸ್ವಾತಂತ್ರ್ಯದಿಂದ ಇಲ್ಲಿಯವರೆಗಿನ ಬಹುಪಾಲು ಸಮಯ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ" ಎಂದು ರಾಹುಲ್ ಗಾಂಧಿ ಹೇಳಿದರು.
"ಬಿಜೆಪಿ 10 ವರ್ಷಗಳ ಹಿಂದೆ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ನಾವು 10 ವರ್ಷ ಅಧಿಕಾರದಲ್ಲಿದ್ದೆವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತಾನೇ ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತೇನೆ ಎಂದು ನಂಬಿದೆ. ಆದರೆ ಅದು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಳಿದ್ದಾರೆ.
"ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿದಿಟ್ಟುಕೊಳ್ಳಲು ಅವರು(ಬಿಜೆಪಿ) ಯಶಸ್ವಿಯಾಗಿದ್ದಾರೆ. ಇದು ತುಂಬಾ ಅಪಾಯಕಾರಿ. ನಿಸ್ಸಂಶಯವಾಗಿಯೂ ಸ್ವಾತಂತ್ರ್ಯದ ಕಲ್ಪನೆಯ ಮೇಲೆ, ಸ್ವತಂತ್ರ ಸಂಸ್ಥೆಗಳನ್ನು, ಸಂಪೂರ್ಣ ದುರಸ್ತಿ ಮಾಡುವ ಅಗತ್ಯವಿದೆ" ಎಂದಿದ್ದಾರೆ.