ವಿದೇಶ

ಇಮ್ರಾನ್ ಖಾನ್ ಬಂಧನ ಕಾನೂನುಬಾಹಿರ, ಕೂಡಲೇ ಬಿಡುಗಡೆಗೊಳಿಸಿ: ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶ

Nagaraja AB

ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಕಾನೂನುಬಾಹಿರ ಎಂದಿರುವ ಪಾಕ್ ಸುಪ್ರೀಂ ಕೋರ್ಟ್, ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ. 

ಇಮ್ರಾನ್ ಖಾನ್ ಬಂಧನವನ್ನು ಅವರ ಕಾನೂನು ತಂಡ ಪ್ರಶ್ನಿಸಿದ ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ದೇಶದ ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು. ಇಮ್ರಾನ್ ಖಾನ್ ಬಂಧನದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಸೇನೆಯ ನೆರವು ಪಡೆದಿತ್ತು.

ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ಹಾಗೂ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಐವರು ಹತ್ಯೆಯಾಗಿದ್ದರು. ಮಿಲಿಟರಿ ಕಟ್ಟಡಗಳ ಮೇಲೆ ದಾಳಿಯಾಗಿತ್ತು. ಅಲ್ಲದೇ, ಸರ್ಕಾರದ ಇನ್ನಿತರ ಕಟ್ಟಡಗಳ ಮೇಲೆ ಬೆಂಕಿ ಹಚ್ಚಲಾಗಿತ್ತು. ಈ ಸಂಬಂಧ ಇಲ್ಲಿಯವರೆಗೂ ಸುಮಾರು 2,000 ಜನರನ್ನು ಬಂಧಿಸಲಾಗಿದೆ. 

70 ವರ್ಷದ ಇಮ್ರಾನ್ ಖಾನ್ ಅವರನ್ನು ಪಾಕ್ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ 2022 ಏಪ್ರಿಲ್ ನಲ್ಲಿ ಪ್ರಧಾನ ಮಂತ್ರಿ ಹುದ್ದೆಯಿಂದ ಉಚ್ಚಾಟಿಸಲಾಗಿತ್ತು. ಅಭಿಪ್ರಾಯ ಸಂಗ್ರಹಗಳ ಪ್ರಕಾರ ಅವರು ಪಾಕಿಸ್ತಾನದ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ.

ಭೂ ವಂಚನೆ ಪ್ರಕರಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಇಮ್ರಾನ್ ಖಾನ್ ಅವರನ್ನು ಮಂಗಳವಾರ ಬಂಧಿಸಿತ್ತು. ಆದರೆ, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಇಮ್ರಾನ್ ಖಾನ್ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದರು. 

SCROLL FOR NEXT