ವಿದೇಶ

ಓಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ: ಅಪಾಯದಿಂದ ತಪ್ಪಿಸಿತು ಸ್ಮಾರ್ಟ್ ವಾಚ್!

Srinivas Rao BV

ಬ್ರಿಟನ್: ಸ್ಮಾರ್ಟ್ ವಾಚ್ ಸಹಾಯದಿಂದ ತಾವು ಹೃದಯಾಘಾತದ ಅಪಾಯದಿಂದ ಪಾರಾದ ವಿಷಯವನ್ನು ಬ್ರಿಟನ್ ನ 42 ವರ್ಷದ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.

ಹಾಕಿ ವೇಲ್ಸ್ ನ ಸಿಇಒ ಪೌಲ್ ವಾಫಮ್, ಬೆಳಿಗ್ಗೆ ಜಾಗಿಂಗ್ ಗೆ ಹೋಗಿದ್ದಾಗ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿದೆ. ತಮ್ಮ ಸ್ಮಾರ್ಟ್ ವಾಚ್ ಮೂಲಕ ಪತ್ನಿಯನ್ನು ಈ ವ್ಯಕ್ತಿ ಸಂಪರ್ಕಿಸಿದ್ದು, ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪತ್ನಿ ಪೌಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

"ಎಂದಿನಂತೆ ಬೆಳಿಗ್ಗೆ 7ಕ್ಕೆ ನಾನು ಜಾಗಿಂಗ್ ಹೋಗಿದ್ದೆ. ಅದಾದ 5 ನಿಮಿಷಗಳಲ್ಲಿ ತೀವ್ರವಾದ ಎದೆ ನೋವು ಕಾಣಿಸಿಕೊಂಡಿತ್ತು. ಎದೆ ಬಿರಿಯುವಂತಹ ಅನುಭವ ಆಯಿತು. ನಂತರ ಹಿಂಡಿದ ಅನುಭವ ಆಯಿತು. ತೀವ್ರವಾದ ನೋವಿನಿಂದ ಬಳಲಿದೆ. ತಕ್ಷಣವೇ ನನ್ನ ಸ್ಮಾರ್ಟ್ ವಾಚ್ ಸಹಾಯದಿಂದ ನನ್ನ ಪತ್ನಿ ಲಾರಾಗೆ ಕರೆ ಮಾಡಿದೆ. ಮನೆಯಿಂದ 5 ನಿಮಿಷವಷ್ಟೇ ದೂರ ಇದ್ದೆ. ಆದ್ದರಿಂದ ಅವಳು ನನ್ನನ್ನು ಕಾರಿನಲ್ಲಿ ಆಸ್ಪತ್ರೆಗೆ ಬೇಗ ಕರೆದೊಯ್ಯಲು ಸಾಧ್ಯವಾಯಿತು ಎಂದು ಪೌಲ್ ಹೇಳಿದ್ದಾರೆ. 

ಪೌಲ್ ವಾಫಮ್ ಅವರ ಅಪಧಮನಿಗಳ ಪೈಕಿ ಒಂದು ಬ್ಲಾಕ್ ಆಗಿದ್ದರಿಂದ ಹೃದಯಾಘಾತ ಉಂಟಾಗಿತ್ತು. ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಬ್ಲಾಕ್ (ರಕ್ತ ಹೆಪ್ಪುಗಟ್ಟಿದ್ದನ್ನು ತೆಗೆದು) ನಿವಾರಿಸಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಹಲವು ಸಂದರ್ಭಗಳಲ್ಲಿ ಹೃದಯಾಘಾತದ ಪ್ರಕರಣಗಳಲ್ಲಿ ಸ್ಮಾರ್ಟ್ ವಾಚ್ ಗಳಿಂದ ಭಾರಿ ಅನಾಹುತಗಳು ತಪ್ಪಿದ ಉದಾಹರಣೆಗಳಿವೆ. ಹೃದಯ ಬಡಿತ, ಇಸಿಜಿ ಮತ್ತು ಹೆಚ್ಚಿನದನ್ನು ಅಳೆಯುವ ಸಂವೇದಕಗಳನ್ನು ಬಳಸಿಕೊಂಡು ಬಳಕೆದಾರರ ಆರೋಗ್ಯದಲ್ಲಿನ ಅಸಹಜತೆಯನ್ನು ಪತ್ತೆಹಚ್ಚುವ ಮೂಲಕ ಅದು ಹೇಗೆ ಜೀವಗಳನ್ನು ಉಳಿಸಿದೆ ಎಂಬುದರ ಕುರಿತು ಅನೇಕ ಉದಾಹರಣೆಗಳಿವೆ.

SCROLL FOR NEXT