ವಿದೇಶ

ಭಾರತೀಯ ಮೂಲದ ಬ್ರಿಟನ್ ಆಂತರಿಕ ಸಚಿವೆ ಸುಯೆಲ್ಲಾರನ್ನು ವಜಾಗೊಳಿಸಿದ ರಿಷಿ ಸುನಕ್

Lingaraj Badiger

ಲಂಡನ್: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ತಮ್ಮ ಸಂಪುಟವನ್ನು ಪುನರ್‌ರಚಿಸಲು ಮುಂದಾಗಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು, ಭಾರತೀಯ ಮೂಲದ ವಿವಾದಿತ ಆಂತರಿಕ ಸಚಿವ ಸುಯೆಲ್ಲಾ ಬ್ರೆವರ್‌ಮನ್ ಅವರನ್ನು ಸೋಮವಾರ ಸಂಪುಟದಿಂದ ವಜಾ ಮಾಡಿದ್ದಾರೆ.

ಕಳೆದ ಶನಿವಾರ ಲಂಡನ್‌ನಲ್ಲಿ ನಡೆದ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಯನ್ನು ಪೊಲೀಸರು ನಿಭಾಯಿಸಿದ ರೀತಿಯನ್ನು ಟೀಕಿಸಿ ಸುಯೆಲ್ಲಾ ಬ್ರಾವರ್‌ಮನ್ ಅವರು ಪೋಸ್ಟ್‌ ಹಾಕಿದ್ದರು. ಈ ಬೆನ್ನಲ್ಲೇ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರೊಂದಿಗೆ ವ್ಯವಹರಿಸುವಾಗ ಲಂಡನ್ ಪೋಲೀಸರು ಪಕ್ಷಪಾತ ನೀತಿ ಅನುಸರಿಸಿದ್ದಾರೆ ಎಂದು ಸುಯೆಲ್ಲಾ ತನ್ನ ಪೋಸ್ಟ್‌ನಲ್ಲಿ ಆರೋಪಿಸಿದ್ದರು. ಸುಯೆಲ್ಲಾ ಅವರ ಈ ಪೋಸ್ಟ್‌ ಉದ್ವಿಗ್ನತೆಯನ್ನು ಪ್ರಚೋದಿಸಲು ಮತ್ತು ಬಲಪಂಥೀಯ ಪ್ರತಿಭಟನಾಕಾರರು ಲಂಡನ್‌ನ ಬೀದಿಗಿಳಿಯಲು ಪ್ರೋತ್ಸಾಹಿಸಿದೆ ಎಂದು ಟೀಕಿಸಿಲಾಗಿತ್ತು. ಇದರಿಂದ ತೀವ್ರ ಒತ್ತಡಕ್ಕೆ ಸಿಲುಕಿದ ರಿಷಿ ಸುನಕ್ ಅವರು ಸುಯೆಲ್ಲಾ ವಿರುದ್ದ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ರಿಷಿ ಸುನಕ್‌ ಅವರು ತಮ್ಮ ಸಚಿವ ಸಂಪುಟದಲ್ಲಿ ಬದಲಾವಣೆಯನ್ನು ತರಲು ಮುಂದಾಗಿದ್ದು, ಇದರ ಭಾಗವಾಗಿ ಸುಯೆಲ್ಲಾ ಅವರನ್ನು ವಜಾಗೊಳಿಸಿದ್ದಾರೆ ಎನ್ನಲಾಗಿದೆ.

ವಜಾಗೊಂಡ ನಂತರ ಮಾತನಾಡಿದ 43 ವರ್ಷದ ವಕೀಲೆ ಸುಯೆಲ್ಲಾ ಅವರು, "ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಜವಾಬ್ದಾರಿ". "ಸೂಕ್ತ ಸಮಯದಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇನೆ" ಎಂದು ಹೇಳಿದ್ದಾರೆ.

SCROLL FOR NEXT