ವಿದೇಶ

ಗಾಜಾ ನಾಗರಿಕರನ್ನು ಇಸ್ರೇಲ್‌ಗೆ ಸ್ಥಳಾಂತರಿಸಬಹುದು: ಈಜಿಪ್ಟ್

Srinivasamurthy VN

ಟೆಲ್ ಅವೀವ್: ಇಸ್ರೇಲ್-ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಸಂಕಷ್ಟಕ್ಕೀಡಾಗಿರುವ ಗಾಜಾ ನಾಗರೀಕರನ್ನು ಇಸ್ರೇಲ್ ಗೆ ಸ್ಥಳಾಂತರಿಸಬಹುದು ಎಂದು ಈಜಿಪ್ಟ್ ಹೇಳಿದೆ.

ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಗಾಜಾದಲ್ಲಿ ಸ್ಥಳಾಂತರಗೊಂಡ ಪ್ಯಾಲೇಸ್ಟಿನಿಯನ್ ನಾಗರಿಕರನ್ನು ಇಸ್ರೇಲ್‌ನಲ್ಲಿರುವ ಮರುಭೂಮಿ ಪ್ರದೇಶಕ್ಕೆ ಸ್ಥಳಾಂತರಿಸಬಹುದು ಎಂದು ಹೇಳಿದ್ದಾರೆ.

ಗಾಜಾ-ಇಸ್ರೇಲ್ ಯುದ್ಧಕ್ಕೆ ಸಂಬಂಧಿಸಿದಂತೆ ಕೈರೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅವರು, ಇಸ್ರೇಲ್-ಹಮಾಸ್ ನಡುವಿನ ಯುದ್ಧದಿಂದಾಗಿ ಗಾಜಾದಲ್ಲಿರುವ ಅಮಾಯಕ ಪ್ಯಾಲೆಸ್ತೀನಿಯನ್ನರು ಸಂಕಷ್ಟಕ್ಕೀಡಾಗಿದ್ದಾರೆ. ಗಾಜಾದಲ್ಲಿ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದ್ದು, ನೀರು, ವಿದ್ಯುತ್, ಔಷಧಿ, ಆಹಾರಗಳಂತಹ ಅಗತ್ಯ ಪರಿಕರಗಳು ಸಿಗದೇ ಜನರು ಪರದಾಡುತ್ತಿದ್ದಾರೆ. ಇಸ್ರೇಲ್ ಬಾಂಬ್ ದಾಳಿ ಪ್ಯಾಲೆಸ್ತೀನಿಯನ್ನರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದ್ದು, ಪ್ರಾಣರಕ್ಷಣೆಗೆ ಪರದಾಡುತ್ತಿದ್ದಾರೆ ಎಂದು ಹೇಳಿದರು.

ಇನ್ನು ಈ ಸುದ್ದಿಗೋಷ್ಠಿಯಲ್ಲಿ  ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಕೂಡ ಇದ್ದರು. ಉಭಯ ನಾಯಕರು ಇಸ್ರೇಲ್-ಗಾಜಾ ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸುತ್ತಿದ್ದು, ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 

ಇತ್ತ ಹಮಾಸ್ ಹೇಳುವಂತೆ ಅಮೆರಿಕ ಮತ್ತು ಇಸ್ರೇಲ್ ಅನ್ನು ಬೆಂಬಲಿಸುವ ಎಲ್ಲಾ ಪಾಶ್ಚಿಮಾತ್ಯ ದೇಶಗಳು "ಗಾಜಾದಲ್ಲಿ ನಾಗರಿಕರ ವಿರುದ್ಧದ ಯುದ್ಧದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿವೆ ಎಂದು ಆರೋಪಿಸಿದೆ. ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ನಡೆದ ಸ್ಫೋಟದ ನಂತರ ಈ ಹೇಳಿಕೆ ಬಂದಿದೆ. ಗಾಜಾ ಪಟ್ಟಿಯಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಸಂಘಟನೆ ಸ್ಫೋಟಕ್ಕೆ ಇಸ್ರೇಲ್ ಕಾರಣ. ಇಸ್ರೇಲ್ ಸೇನೆಯೇ ಉದ್ದೇಶಪೂರ್ವಕವಾಗಿ ಆಸ್ಪತ್ರೆ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ಆರೋಪಿಸಿದೆ.
 

SCROLL FOR NEXT