ಟೆಲ್ ಅವಿವ್: ಯುದ್ಧ ಬಯಸಿದ್ದು, ಆರಂಭಿಸಿದ್ದು ನಾವಲ್ಲ, ಇದೀಗ ಹಮಾಸ್ ವಿರುದ್ಧ 2ನೇ ಹಂತದ ದಾಳಿಗೆ ಸಜ್ಜಾಗಿದ್ದು, ಗಾಜಾ ವಿರುದ್ಧ ಭೂಮಿ, ವಾಯು, ಸಮುದ್ರದಿಂದಲೂ ದಾಳಿ ಮಾಡುತ್ತೇವೆಂದು ಇಸ್ರೇಲ್ ಸೇನಾಪಡೆ ಭಾನುವಾರ ಹೇಳಿದೆ.
ವಿಡಿಯೋ ಸಂದೇಶ ನೀಡಿರುವ ಇಸ್ರೇಲ್ ಸೇನಾಪಡೆಯ ವಕ್ತಾರ ಡೆನಿಯಲ್ ಹಗರಿ, ಇಸ್ರೇಲ್ ಸೇನಾಪಡೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ. ಹಮಾಸ್ ವಿರುದ್ಧ 2ನೇ ಹಂತದ ದಾಳಿಗೆ ಮುಂದಾಗಿದ್ದೇವೆ. ಗಾಜಾದಲ್ಲಿ ಭೂಮಿ, ಸಮುದ್ರ ಹಾಗೂ ವಾಯು ಮೂಲಕ ದಾಳಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ಮಾನವೀಯತೆಯ ಮೇಲೆ ಅಪರಾಧವೆಸಗಿತ್ತು. ಯುದ್ಧವನ್ನು ಇಸ್ರೇಲ್ ಆರಂಭಿಸಿರಲಿಲ್ಲ. ಇಸ್ರೇಲ್ ಯುದ್ಧವನ್ನು ಬಯಸಿಯೂ ಇರಲಿಲ್ಲ. ಇಸ್ರೇಲಿಗರ ಮೇಲೆ ಹಮಾಸ್ ದಾಳಿ ನಡೆಸಿತ್ತು. ಇದು ಅಪರಾಧ. ಇದೀಗ ಹಮಾಸ್ ಉಗ್ರರು ನಾಗರೀಕರನ್ನು ಗುರಾಣಿಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಹಮಾಸ್ ಉಗ್ರರ ನಿರ್ನಾಮದ ಹೊರತು ಕದನ ವಿರಾಮ ಸಾಧ್ಯವಿಲ್ಲ ಎಂದ ಇಸ್ರೇಲ್; ಗಾಜಾದಲ್ಲಿ 2ನೇ ಹಂತದ ದಾಳಿ ಶುರು
ನಮ್ಮ ಹೋರಾಟ ಹಮಾಸ್ ವಿರುದ್ಧವೇ ಹೊರತು ಗಾಜಾದಲ್ಲಿರುವ ಜನತೆಯ ವಿರುದ್ಧವಲ್ಲ. ಆದರೆ, ಹಮಾಸ್ ಅಲ್ಲಿನ ನಾಗರೀಕರನ್ನು ಗುರಾಣಿಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಶಾಲೆ, ಮಸೀದಿ ಹಾಗೂ ಆಸ್ಪತ್ರೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೇ ನಾವು ಹೇಳಿದ್ದೇವೆ. ಹಮಾಸ್ ಉಗ್ರರು ನಾಗರೀಕ ಕಟ್ಟಡಗಳ ಒಳಗೆ ಹಾಗೂ ಸುರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸೇನಾಪಡೆ ಭಯೋತ್ಪಾದಕರು ಹಾಗೂ ನಾಗರೀಕರ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲದು. ಹೀಗಾಗಿಯೇ ಹಮಾಸ್ ನಿಂದ ದೂರ ಸರಿಯುವಂತೆ ಜನತೆಗೆ ವಾರಗಳಿಂದ ಎಚ್ಚರಿಕೆ ನೀಡಲಾಗುತ್ತಿದೆ. ಉತ್ತರ ಗಾಜಾ ಮತ್ತು ಗಾಜಾ ನಗರದಲ್ಲಿರುವ ನಾಗರಿಕರು ದಕ್ಷಿಣಕ್ಕೆ ತೆರಳುವಂತೆ ಎಚ್ಚರಿಕೆ ನೀಡುತ್ತಿದ್ದೇವೆ. ಆ ಪ್ರದೇಶದಲ್ಲಿ ನೀರು, ಆಹಾರ ಮತ್ತು ಔಷಧಗಳನ್ನು ನೀಡಲಾಗುತ್ತಿದೆ. ಅಲ್ಲಿ ಮಾನವೀಯ ನೆರವುಗಳನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.