ವಿಶ್ವಸಂಸ್ಥೆ: ಇಂಡಿಯಾವನ್ನು ಭಾರತ್ ಎಂದು ಮರು ನಾಮಕರಣ ಮಾಡುವ ಕುರಿತು ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವಂತೆಯೇ, ಹೆಸರು ಬದಲಾವಣೆಗೆ ರಾಷ್ಟ್ರಗಳಿಂದ ಮನವಿ ಬಂದರೆ ಅದನ್ನು ಪರಿಗಣಿಸಲಾಗುತ್ತದೆ ಎಂದು ವಿಶ್ವಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಕುರಿತು ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಉಪ ವಕ್ತಾರ ಫರ್ಹಾನ್ ಹಕ್, ಕಳೆದ ವರ್ಷ ಟರ್ಕಿ ತನ್ನ ಹೆಸರನ್ನು ಟರ್ಕಿಯೆ ಎಂದು ಬದಲಾಯಿಸುವಂತೆ ರಾಷ್ಟ್ರಗಳಿಂದ ಮನವಿ ಬಂದರೆ, ನಿಸ್ಸಂಶಯವಾಗಿ ಅಂತಹ ಮನವಿಗಳನ್ನು ಪರಿಗಣಿಸುತ್ತೇವೆ ಎಂದಿದ್ದಾರೆ.
ಜಿ 20 ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ಈವರೆಗೆ ಬರೆಯಲಾಗುತ್ತಿದ್ದ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಬರೆದಿರುವುದು ತಿಳಿದುಬಂದ ನಂತರ ಭಾರತದಲ್ಲಿ ಇದು ತೀವ್ರ ಚರ್ಚೆಗೆ ಕಾರಣವಾಗಿದ್ದು, ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ಇದನ್ನೂ ಓದಿ: ವಿಪಕ್ಷಗಳು ತಮ್ಮ ಮೈತ್ರಿಯ ಹೆಸರನ್ನು 'INDIA' ದಿಂದ ‘BHARAT’ ಎಂದು ಬದಲಿಸಿಕೊಳ್ಳಲಿ: ಶಶಿ ತರೂರ್ ಸಲಹೆ
ಈ ವಿಚಾರ ಕುರಿತ ವಿವಾದವನ್ನು ತಪ್ಪಿಸುವಂತೆ ಪ್ರಧಾನಿ ಮೋದಿ ಬುಧವಾರ ತಮ್ಮ ಸಚಿವ ಸಹೋದ್ಯೋಗಿಗಳಿಗೆ ತಿಳಿಸಿದ್ದು, ಇದು ದೇಶದ ಪ್ರಾಚೀನ ಹೆಸರು ಎಂದಿದ್ದಾರೆ. ಅಲ್ಲದೇ, ಜಿ 20 ಶೃಂಗಸಭೆ ವೇಳೆಯಲ್ಲಿ ಯಾವ ವಿಷಯ ಪ್ರಸ್ತಾಪಿಸಬೇಕು, ಯಾವುದನ್ನು ಪ್ರಸ್ತಾಪಿಸಬಾರದು ಎಂಬ ಸಲಹೆಯನ್ನು ಕೂಡಾ ಮೋದಿ ನೀಡಿದ್ದಾರೆ ಎನ್ನಲಾಗಿದೆ.
ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯುತ್ತಿದ್ದು, ಯುಎಸ್ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವದಾದ್ಯಂತದ ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.