ಬಲೂಚಿಸ್ತಾನದಲ್ಲಿ ಗುಂಡಿಟ್ಟ ಹತ್ಯೆ ಮಾಡಿದ ಉಗ್ರರು
ಬಲೂಚಿಸ್ತಾನದಲ್ಲಿ ಗುಂಡಿಟ್ಟ ಹತ್ಯೆ ಮಾಡಿದ ಉಗ್ರರು 
ವಿದೇಶ

Terror Attack In Pakistan: ಬಲೂಚಿಸ್ತಾನದಲ್ಲಿ ಬಸ್ ನಲ್ಲಿ ತೆರಳುತ್ತಿದ್ದ 11 ಮಂದಿ ಅಪಹರಣ, ಗುಂಡಿಟ್ಟು ಹತ್ಯೆ!

Srinivasamurthy VN

ಲಾಹೋರ್: ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಬಸ್ ನಲ್ಲಿ ತೆರಳುತ್ತಿದ್ದವರನ್ನು ಅಪಹರಣ ಮಾಡಿ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಹೌದು.. ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಉಗ್ರರು 9 ಮಂದಿಯನ್ನು ಅಪಹರಿಸಿ, ಅವರನ್ನು ಭೀಕರವಾಗಿ (Terror Attack) ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮೂಲಗಳ ಪ್ರಕಾರ ಬಲೂಚಿಸ್ತಾನದ ಕ್ವೆಟ್ಟಾದಿಂದ ತಫ್ತಾನ್‌ಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಬಸ್ ವೊಂದು ತೆರಳುತ್ತಿತ್ತು.

ಇದೇ ವೇಳೆ ವಾಹನವನ್ನು ಅಡ್ಡಹಾಕಿದ ಅಪರಿಚಿತ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ವಾಹನದಿಂದ ಪ್ರಯಾಣಿಕರನ್ನು ಹೊರಗೆಳೆದ ಉಗ್ರರು, ಅವರ ಮೇಲೆ ನಿರಂತರವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಪಂಜಾಬ್‌ ಪ್ರಾಂತ್ಯದ 9 ಮಂದಿ ಸೇರಿ ಒಟ್ಟು 11 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಾಹನದಲ್ಲಿ ತೆರಳುತ್ತಿದ್ದ ಪ್ರಯಾಣಿಕರನ್ನು ಉಗ್ರರು ಅಪಹರಿಸಿದ್ದಾರೆ. ಇದಾದ ಬಳಿಕ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಕೊಲೆ ಮಾಡಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 11 ಜನರನ್ನು ಹತ್ಯೆ ಮಾಡಲಾಗಿದೆ. 9 ಜನರ ಶವಗಳು ಬೆಟ್ಟ ಗುಡ್ಡಗಳು, ಸೇತುವೆಗಳ ಬಳಿ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ವಾಜಿರಾಬಾದ್‌, ಮಂಡಿ, ಬಹಾವುದ್ದೀನ್‌ ಹಾಗೂ ಗುಜ್ರನ್‌ವಾಲಾದವರು ಎಂದು ಗುರುತಿಸಲಾಗಿದೆ. ಇದೇ ಪ್ರಾಂತ್ಯದಲ್ಲಿ ಮತ್ತೊಂದು ಕಡೆ ದಾಳಿ ನಡೆದಿದ್ದು, ದಾಳಿಯಲ್ಲಿ ಇಬ್ಬರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಶೆಹಬಾಜ್‌ ಷರೀಫ್‌ ಖಂಡನೆ

ಇನ್ನು ದಾಳಿ ಕುರಿತು ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, 'ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ. ಯಾವುದೇ ರೀತಿಯ ಉಗ್ರವಾದವನ್ನು ನಾವು ಸಹಿಸುವುದಿಲ್ಲ. ದಾಳಿಗೆ ಕಾರಣರಾದವರಿಗೆ ತಕ್ಕ ಶಾಸ್ತಿ ಮಾಡುತ್ತೇವೆ' ಎಂದಿದ್ದಾರೆ.

ಉಗ್ರರ ದಾಳಿಯ ಬಳಿಕ ಯಾವುದೇ ಸಂಘಟನೆಯು ಹೊಣೆಯನ್ನು ಹೊತ್ತುಕೊಂಡಿಲ್ಲ. ಕಳೆದ ತಿಂಗಳು ಗ್ವಾದರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 17 ಮಂದಿಯನ್ನು ಹತ್ಯೆ ಮಾಡಿದ್ದರು.

SCROLL FOR NEXT