ನವದೆಹಲಿ: ಇಸ್ರೇಲ್ ವಿರುದ್ಧ ಆಕ್ರೋಶಗೊಂಡಿರುವ ಇರಾನ್ ಅಮೆರಿಕ, ಅರಬ್ ರಾಷ್ಟ್ರಗಳ ಮಧ್ಯಸ್ತಿಕೆಗೂ ಬಗ್ಗದೇ ದಾಳಿ ಶತಃ ಸಿದ್ಧ ಎಂದು ಸಾರಿದೆ.
ಹೌದು..ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ಬಳಿಕ ಇಸ್ರೇಲ್ ವಿರುದ್ಧ ಆಕ್ರೋಶಗೊಂಡಿರುವ ಇರಾನ್ ಯುದ್ಧಕ್ಕೆ ಸಕಲ ರೀತಿಯ ಸಿದ್ಧತೆ ನಡೆಸಿದೆ.
ಈಗಾಗಲೇ ಇಸ್ರೇಲ್ ಮೇಲೆ ಲೆಬನಾನಿನ ಇರಾನ್-ಬೆಂಬಲಿತ ಹೆಜ್ಬೊಲ್ಲಾ ಉಗ್ರ ಸಂಘಟನೆ ದಾಳಿ ನಡೆಸುತ್ತಿದ್ದು, ಈ ದಾಳಿ ಬೆನ್ನಲ್ಲೇ ಇಸ್ಲಾಮಿಕ್ ರಿಪಬ್ಲಿಕ್ ಸೇನೆ (ಇರಾನ್ ಸೇನೆ) ಕೂಡ ಇಸ್ರೇಲ್ ವಿರುದ್ಧದ ಯುದ್ಧಕ್ಕೆ ಸಿದ್ಧತೆ ನಡೆಸಿದೆ.
ಏತನ್ಮಧ್ಯೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ಅಮೆರಿಕ ಮತ್ತು ಅರಬ್ ರಾಷ್ಟ್ರಗಳ ಪ್ರಯತ್ನಗಳನ್ನು ಇರಾನ್ ತಿರಸ್ಕರಿಸಿದ್ದು, ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ಈ ವಿಚಾರದಲ್ಲಿ ಇರಾನ್ ಗೆ ಜೋರ್ಡಾನ್ ಮತ್ತು ಲೆಬನಾನ್ ದೇಶಗಳು ಬೆಂಬಲ ಘೋಷಣೆ ಮಾಡಿದ್ದು, ಇದು ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ.
ಪ್ರತೀಕಾರಕ್ಕೆ ಇರಾನ್ ಸಂಚು
ಹಮಾಸ್ ಹಾಗೂ ಹೆಜ್ಬೊಲ್ಲಾ ಬಂಡುಕೋರ ಪಡೆಯ ಮೂವರು ಮುಖ್ಯಸ್ಥರ ಹತ್ಯೆ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆವರಿಸಿದ್ದು, ಇಸ್ರೇಲ್ ವಿರುದ್ಧ ಪ್ರತೀಕಾರಕ್ಕೆ ಇರಾನ್ ಮಿತ್ರಕೂಟ ಹವಣಿಸುತ್ತಿದೆ. ಮಿತ್ರ ರಾಷ್ಟ್ರ ಇಸ್ರೇಲ್ ನೆರವಿಗೆ ಧಾವಿಸಿರುವ ಅಮೆರಿಕ, ಬ್ರಿಟನ್ ಮಿತ್ರಕೂಟದ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿವೆ.
ಬಂಡುಕೋರರ ಮೇಲೆ ನಿಲ್ಲದ ಇಸ್ರೇಲ್ ದಾಳಿ
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಯುದ್ಧಕ್ಕೆ ತಾನೂ ಸಿದ್ಧ ಎಂದು ಹೇಳಿಕೊಂಡಿರುವ ಇಸ್ರೇಲ್, ಗಡಿಯಲ್ಲಿನ ಹೆಜ್ಬೊಲ್ಲಾ ಬಂಡುಕೋರ ನೆಲೆಗಳ ಮೇಲೆ ತನ್ನ ದಾಳಿ ತೀವ್ರಗೊಳಿಸಿದೆ. ಗಾಜಾಪಟ್ಟಿಯಲ್ಲಿನ ವಿವಿಧ ಪ್ರದೇಶಗಳ ಮೇಲೆ ನಡೆಸಿದ ವಾಯುದಾಳಿಯಲ್ಲಿ 18 ಮಂದಿ ಮೃತರಾಗಿದ್ದಾರೆ. ಬಂಡುಕೋರರ ಪ್ರತಿ ದಾಳಿಗೆ ಇಸ್ರೇಲ್‌ನಲ್ಲಿ ಇಬ್ಬರು ನಾಗರಿಕರು ಸಾವಿಗೀಡಾಗಿದ್ದಾರೆ.
ಪ್ಯಾಲೆಸ್ತೀನ್ ಬಂಡುಕೋರರನ್ನು ಗುರಿಯಾಗಿಸಿ ಇಸ್ರೇಲ್ ರಕ್ಷಣಾ ಪಡೆ ಭಾನುವಾರ ಆಲ್ ಅಕ್ಸಾ ಆಸ್ಪತ್ರೆ ಮೇಲೆ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಒಬ್ಬ ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ನಿರಾಶ್ರಿತರಿಗೆ ಆಶ್ರಯ ನೀಡಲಾಗಿದ್ದ ಡೀರ್ ಅಲ್ ಬಲಾಹ್ ಆಸ್ಪತ್ರೆ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಮೂರು ಮಂದಿ ಮೃತರಾಗಿದ್ದಾರೆ.
ಉತ್ತರ ಗಾಜಾದ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದಾರೆ. ವಾಹನಗಳ ಗುರಿಯಾಗಿಸಿ ಇಸ್ರೇಲ್ ಸೇನೆ ನಡೆಸಿದ 4ನೇ ದಾಳಿಯಲ್ಲಿ ಮೂವರು ಅಸುನೀಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇಸ್ರೇಲ್ ರಾಜಧಾನಿ ಮೇಲೆ ಕ್ಷಿಪಣಿ ದಾಳಿ
ಅಂತೆಯೇ ಇತ್ತ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಮೇಲೂ ದಾಳಿ ಮುಂದುವರೆದಿದ್ದು, ಪ್ಯಾಲೆಸ್ತೀನ್ ಬಂಡುಕೋರ ಗುಂಪು ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ ನಾಗರಿಕರ ಮೇಲೆ ದಾಳಿ ನಡೆಸಿದೆ. ಉಪ ನಗರದಲ್ಲಿ ಹಲವು ಕಡೆ ಜನರಿಗೆ ಚಾಕು ಇರಿಯಲಾಗಿದೆ. ಈ ದಾಳಿಯಲ್ಲಿ 70 ಹಾಗೂ 80 ವರ್ಷದ ಇಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಇದೇ ವೇಳೆ ಇಸ್ರೇಲ್ ಮೇಲೆ ಭಾರಿ ಸ್ಪೋಟಕ ಹೊತ್ತ ಐದು ಕ್ಷಿಪಣಿ ದಾಳಿ ನಡೆಸಲಾಗಿದ್ದು, ಗಡಿಯಲ್ಲೆ ಕ್ಷಿಪಣಿಗಳನ್ನು ಇಸ್ರೇಲ್ ನ ಐರನ್ ಡೋಮ್ ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. ದಾಳಿಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಇಸ್ರೇಲಿ ಪ್ರದೇಶದ ಒಳಗೆ ಹೆಜ್ಬೊಲ್ಲಾ ಪಡೆಗಳು ತನ್ನ ದಾಳಿಯನ್ನು ಚುರುಕುಗೊಳಿಸಲಿದೆ. ಸೇನಾ ನೆಲೆಗಳಲ್ಲದೆ ಇತರೆ ಸ್ಥಳಗಳಲ್ಲಿಯೂ ದಾಳಿ ನಡೆಸಲಿದೆ ಎಂದು ಇರಾನ್ ಶನಿವಾರ ಹೇಳಿತ್ತು.