ಇಸ್ಲಾಮಾಬಾದ್: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಖೈಬರ್ ಜಿಲ್ಲೆಯಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ 10 ದಿನಗಳಲ್ಲಿ ಕನಿಷ್ಠ 37 ಉಗ್ರರು ಹತರಾಗಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಆಗಸ್ಟ್ 20 ರಿಂದ ಉಗ್ರರ ಪತ್ತೆ ವರದಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಖೈಬರ್ ನ ತಿರ್ಹಾ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದೆ.
ಬುಧವಾರ ಮತ್ತು ಗುರುವಾರ ನಡೆಸಿದ ಕಾರ್ಯಾಚರಣೆಗಳ ವಿವರಗಳನ್ನು ISPR ನೀಡಿದೆ. ಸೇನಾ ಪಡೆಗಳು ಉಗ್ರಗಾಮಿಗಳಿರುವ ಸ್ಥಳಗಳನ್ನು ಪರಿಣಾಮಕಾರಿಯಾಗಿ ಆವರಿಸಿಕೊಂಡಿದ್ದು, 12 ಉಗ್ರರನ್ನು ಹತ್ಯೆ ಮಾಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸದ್ಯ ನಡೆಯುತ್ತಿರುವ ಕಾರ್ಯಾಚರಣೆ ಉಗ್ರರ ಗುಂಪುಗಳು ಮತ್ತು ಅವರ ಅಂಗಸಂಸ್ಥೆಗಳಿಗೆ ದೊಡ್ಡ ಹಿನ್ನಡೆಗೆ ಕಾರಣವಾಗಿದೆ ಎಂದು ಸೇನೆ ಹೇಳಿದೆ. ಪ್ರದೇಶದಲ್ಲಿ ಶಾಂತಿ ಪುನರ್ ಸ್ಥಾಪಿಸುವವರೆಗೂ ಮತ್ತು ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡುವವರೆಗೆ ಕಾರ್ಯಾಚರಣೆ ಮುಂದುವರೆಯುವುದಾಗಿ ISPR ತಿಳಿಸಿದೆ.