ವಿದೇಶ

ಭಾರತದ ಸುದ್ದಿವಾಹಿನಿಗಳ ಪ್ರಸಾರಕ್ಕೆ ನಿಷೇಧ ಹೇರಿ: ಬಾಂಗ್ಲಾದೇಶ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ

ಎಲ್ಲಾ ಭಾರತೀಯ ಟಿವಿ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಲು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಆಪರೇಷನ್ ಆಕ್ಟ್ 2006 ರ ಸೆಕ್ಷನ್ 29 ರ ಅಡಿಯಲ್ಲಿ ನಿರ್ದೇಶನ ನೀಡುವಂತೆ ರಿಟ್ ಅರ್ಜಿಯಲ್ಲಿ ಕೋರಲಾಗಿದೆ.

ಢಾಕಾ: ತಮ್ಮ ವಿರುದ್ಧ ಪ್ರಚೋದನಕಾರಿ ಸುದ್ದಿಗಳನ್ನು ಉಲ್ಲೇಖಿಸಿ ಪ್ರಸಾರ ಮಾಡುತ್ತಿದ್ದು, ಭಾರತದ ಎಲ್ಲಾ ಸುದ್ದಿವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಎಖ್ಲಾಸ್ ಉದ್ದೀನ್ ಭುಯಾನ್ ಎಂಬುವವರು ಅರ್ಜಿ ಸಲ್ಲಿಸಿದ್ದು, ಈ ವಿಷಯವನ್ನು ಅವರೇ ದೃಢಪಡಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಫಾತಿಮಾ ನಜೀಬ್ ಸಿಕ್ದರ್ ಮಹಮುದೂರ್ ರಾಜಿ ಅವರನ್ನೊಳಗೊಂಡ ಹೈಕೋರ್ಟ್ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಬಹುದು ಎಂದು ವಕೀಲ ಭೂಯಾನ್ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಎಲ್ಲಾ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಎಲ್ಲಾ ಭಾರತೀಯ ಟಿವಿ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಲು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಆಪರೇಷನ್ ಆಕ್ಟ್ 2006 ರ ಸೆಕ್ಷನ್ 29 ರ ಅಡಿಯಲ್ಲಿ ನಿರ್ದೇಶನ ನೀಡುವಂತೆ ರಿಟ್ ಅರ್ಜಿಯಲ್ಲಿ ಕೋರಲಾಗಿದೆ. ಬಾಂಗ್ಲಾದೇಶದಲ್ಲಿ ಭಾರತೀಯ ಟಿವಿ ಚಾನೆಲ್‌ಗಳ ಮೇಲೆ ನಿಷೇಧ ಹೇರುವ ನಿಯಮವನ್ನು ಏಕೆ ಹೊರಡಿಸಬಾರದು ಎಂದು ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಸ್ಟಾರ್ ಜಲ್ಶಾ, ಸ್ಟಾರ್ ಪ್ಲಸ್, ಝೀ ಬಾಂಗ್ಲಾ, ರಿಪಬ್ಲಿಕ್ ಬಾಂಗ್ಲಾ ಮತ್ತು ಇತರ ಭಾರತೀಯ ಸುದ್ದಿವಾಹಿನಿಗಳ ಪ್ರಸಾರವನ್ನು ನಿಷೇಧಿಸಲು ರಿಟ್ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಭಾರತೀಯ ಸುದ್ದಿವಾಹಿನಿಗಳಲ್ಲಿ ಪ್ರಚೋದನಕಾರಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಬಾಂಗ್ಲಾದೇಶದ ಸಂಸ್ಕೃತಿಯನ್ನು ವಿರೋಧಿಸುವ ವಿಷಯದ ಅನಿಯಂತ್ರಿತ ಪ್ರಸಾರಗಳು ಯುವಜನತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ವಾರ್ತಾ ಸಚಿವಾಲಯ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿಗಳು, ಬಾಂಗ್ಲಾದೇಶ ದೂರಸಂಪರ್ಕ ನಿಯಂತ್ರಣ ಆಯೋಗ (BTRC) ಮತ್ತು ಇತರರನ್ನು ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸಂಬಂಧಗಳು ಹದಗೆಟ್ಟವು. ಆ ದೇಶದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಹಿಂಸಾತ್ಮಕ ದಾಳಿಗಳು ಹೆಚ್ಚಾಗುತ್ತಿವೆ. ಯೂನಸ್ ಅಧಿಕಾರ ವಹಿಸಿಕೊಂಡ ನಂತರವೂ ಹಿಂದೂ ಅಲ್ಪಸಂಖ್ಯಾತ ಗುಂಪುಗಳು ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತಮ್ಮ ಸಮುದಾಯದ ಸದಸ್ಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಆರೋಪಿಸುತ್ತಾ ಬಂದಿದೆ.

ನವೆಂಬರ್ 25 ರಂದು ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ನ ಮಾಜಿ ಸದಸ್ಯ ಹಿಂದೂ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಂಧಿಸಿದ ನಂತರ ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜತಾಂತ್ರಿಕ ಗದ್ದಲ ಭುಗಿಲೆದ್ದಿತು.

ಬಾಂಗ್ಲಾದೇಶದ ಸಮ್ಮಿಲಿತಾ ಸನಾತನಿ ಜಾಗರಣ್ ಜೋಟೆಯ ವಕ್ತಾರರಾದ ದಾಸ್ ಅವರನ್ನು ನವೆಂಬರ್ 26 ರಂದು ದೇಶದ್ರೋಹ ಪ್ರಕರಣದಲ್ಲಿ ಚಟ್ಟೋಗ್ರಾಮ್‌ನ ಆರನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ನಿರಾಕರಿಸಿ ಜೈಲಿಗೆ ಕಳುಹಿಸಿತು. ಇದು ಅವರ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆಗೆ ಮತ್ತು ವಕೀಲರ ಹತ್ಯೆಗೆ ಕಾರಣವಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT