ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರಕ್ಕೆ ಇತ್ತೀಚೆಗೆ ಬಲಿಯಾದ ತರುಣ್ ISKCON ಅರ್ಚಕನಲ್ಲ.. ಆತನ ಸಾವಿಗೆ ಕೋಮು ಹಿಂಸಾಚಾರ ಕಾರಣವಲ್ಲ ಎಂದು ಬಾಂಗ್ಲಾದೇಶ ಹೇಳಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ವ್ಯಕ್ತಿಯ ಹತ್ಯೆಯ ಆರೋಪದ ಕುರಿತು ಇಸ್ಕಾನ್‌ನ ಕೋಲ್ಕತಾ ಉಪಾಧ್ಯಕ್ಷ ರಾಧಾರಮಣ್ ದಾಸ್ ಅವರು ಮಾಡಿದ್ದ ಆರೋಪಗಳನ್ನು ಬಾಂಗ್ಲಾ ಸರ್ಕಾರ ತಳ್ಳಿಹಾಕಿದ್ದು, ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹತ್ಯೆಯಾದ ವ್ಯಕ್ತಿ ಹಿಂದೂ ಅರ್ಚಕರಾಗಿರಲಿಲ್ಲ.
ಆತ ಕಳ್ಳತನ ಪ್ರಕರಣದಲ್ಲಿ ಮೃತಪಟ್ಟಿದ್ದಾರೆಯೇ ಹೊರತು ಕೋಮು ಹಿಂಸಾಚಾರದಿಂದಲ್ಲ ಎಂದು ಅಲ್ಲಿನ ಮಧ್ಯಂತರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ರಾಧಾರಮಣ್ ದಾಸ್ ಅವರು ‘ಎಕ್ಸ್’ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು, ‘ಬಾಂಗ್ಲಾದಲ್ಲಿ ತರುಣ್ ಕುಮಾರ್ ದಾಸ್ ಎಂದು ಗುರುತಿಸಲಾದ ಹಿಂದೂ ಅರ್ಚಕನ ಕೈ–ಕಾಲುಗಳನ್ನು ಕಟ್ಟಿಹಾಕಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ’ ಎಂದು ಆರೋಪಿಸಿದ್ದರು.
ತರುಣ್ ಹತ್ಯೆಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರ ಸ್ಪಷ್ಟನೆ ನೀಡಿದ್ದು, ನಾಟೋರ್‌ನಲ್ಲಿರುವ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಕಳ್ಳತನ ಪ್ರಕರಣದಲ್ಲಿ ತರುಣ್ ಕುಮಾರ್ ಮೃತಪಟ್ಟಿರುವುದಾಗಿ ತಿಳಿಸಿದೆ.
ಬಾಂಗ್ಲಾದೇಶದ ಇಸ್ಕಾನ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹೃಷಿಕೇಶ್ ಗೌರಂಗಾ ದಾಸ್ ಮಾತನಾಡಿ, ‘ತರುಣ್ ಕುಮಾರ್ ಅವರು ಇಸ್ಕಾನ್ ಅಥವಾ ಇತರ ಯಾವುದೇ ಸಂಸ್ಥೆಗಳೊಂದಿಗೂ ಸಂಬಂಧ ಹೊಂದಿರಲಿಲ್ಲ’ ಎಂದು ಹೇಳಿದ್ದಾರೆ.
ಅಂತೆಯೇ "ತರುಣ್ ಕುಮಾರ್ ಸ್ಮಶಾನ ಸಮಿತಿಯ ಸದಸ್ಯರಾಗಿರಲಿಲ್ಲ, ಅವರು ಪಾದ್ರಿಯೂ ಅಲ್ಲ. ಅವರು ಮಾನಸಿಕವಾಗಿ ಅಸ್ಥಿರರಾಗಿದ್ದರು" ಎಂದು ನಾಟೋರ್‌ನ ಶವಸಂಸ್ಕಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ್ ರಾಯ್ ಟಿಪ್ಪು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.