ವಿದೇಶ

ಹಮಾಸ್ ವಿರುದ್ಧದ ಯುದ್ಧದಲ್ಲಿ ಭಾರತ ಮೂಲದ 19 ವರ್ಷದ ಯೋಧ ಸಾವು: ಇಸ್ರೇಲ್

Srinivasamurthy VN

ನವದೆಹಲಿ: ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನೆ ನಡೆಸುತ್ತಿರುವ ಯುದ್ಧದಲ್ಲಿ ಭಾರತ ಮೂಲದ 19 ವರ್ಷದ ಯೋಧನೋರ್ವ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಜಾದಲ್ಲಿ ಭಾರತೀಯ ಮೂಲದ 19 ವರ್ಷದ ಯೋಧನ ಸಾವನ್ನು ಇಸ್ರೇಲ್ ಘೋಷಿಸಿದ್ದು, ಮೃತ ಯೋಧನನ್ನು 19 ವರ್ಷದ ಸಾರ್ಜೆಂಟ್ ಓಜ್ ಡೇನಿಯಲ್ ಎಂದು ಗುರುತಿಸಲಾಗಿದೆ.

ಹಮಾಸ್ ಜೊತೆಗಿನ ಇಸ್ರೇಲಿ ಯೋಧರ ಸಂಘರ್ಷ 143ನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ ಭಾರತೀಯ ಮೂಲದ 19 ವರ್ಷದ ಇಸ್ರೇಲಿ ಯೋಧ ಮೃತಪಟ್ಟಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಘೋಷಿಸಿದೆ.

"ಭಾರತೀಯ ಮೂಲದವರು ಮತ್ತು ಅಕ್ಟೋಬರ್ 7 ರಂದು ಗಾಜಾಕ್ಕೆ ಅಪಹರಿಸಲ್ಪಟ್ಟ ಸಾರ್ಜೆಂಟ್ ಓಜ್ ಡೇನಿಯಲ್ ಅವರು ಸತ್ತಿದ್ದಾರೆ ಎಂದು ಘೋಷಿಸಲಾಗಿದೆ" ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಹೇಳಿದ್ದಾರೆ.

ಅಕ್ಟೋಬರ್ 7, 2023 ರಂದು ಹಮಾಸ್ ಅಪಹರಿಸಿದ 253 ಒತ್ತೆಯಾಳುಗಳಲ್ಲಿ ಡೇನಿಯಲ್ ರನ್ನೂ ಕೂಡ ಪಟ್ಟಿಮಾಡಲಾಗಿತ್ತು. ಗುಪ್ತಚರ ವರದಿಗಳ ಆಧಾರದ ಮೇಲೆ ಸೇನೆಯ ಮುಖ್ಯ ರಬ್ಬಿ ಡೇನಿಯಲ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ವರದಿಗಳ ಪ್ರಕಾರ ಡೇನಿಯಲ್ ದೇಹ ಇನ್ನೂ ಗಾಜಾದಲ್ಲಿದ್ದು, ಗಾಜಾದಲ್ಲಿ ಸುಮಾರು 130 ಒತ್ತೆಯಾಳುಗಳು ಇನ್ನೂ ಉಳಿದಿದ್ದಾರೆ. ಆದರೆ ಅವರಲ್ಲಿ ಎಷ್ಟು ಮಂದಿ ಬದುಕುಳಿದಿದ್ದಾರೆ ಎಂಬುದರ ಕುರಿತು ಯಾವುದೇ ವಿವರಗಳು ಲಭ್ಯವಿಲ್ಲ. ಗಾಜಾದಿಂದ ಇದುವರೆಗೆ 109 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು, ಭಾರತೀಯ ಮೂಲದ ಇನ್ನೊಬ್ಬ ಇಸ್ರೇಲಿ ಸೈನಿಕನ ಸಾವು ಡಿಸೆಂಬರ್ 2023 ರಲ್ಲಿ ವರದಿಯಾಗಿತ್ತು. ಮಹಾರಾಷ್ಟ್ರದ ಬೆನೆ ಇಸ್ರೇಲ್ ಸಮುದಾಯದವರಾದ 34 ವರ್ಷ ವಯಸ್ಸಿನ ಸಾರ್ಜೆಂಟ್ ಗಿಲ್ ಡೇನಿಯಲ್ಸ್ ಯುದ್ಧದಲ್ಲಿ ಸಾವನ್ನಪ್ಪಿದ್ದರು. ಅಂತೆಯೇ ನವೆಂಬರ್ 2023 ರಲ್ಲಿ, 20 ವರ್ಷ ವಯಸ್ಸಿನ ಸಿಬ್ಬಂದಿ ಭಾರತ ಮೂಲದ ಹಲೇಲ್ ಸೊಲೊಮನ್ ಸಹ ಗಾಜಾದಲ್ಲಿ ಹೋರಾಡುತ್ತಿದ್ದಾಗ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಂದಹಾಗೆ ಇಸ್ರೇಲ್‌ನಲ್ಲಿ ಸುಮಾರು 85,000 ಭಾರತೀಯ ಮೂಲದ ಯಹೂದಿಗಳಿದ್ದಾರೆ. ಅವರಲ್ಲಿ ಕೇರಳದ ಕೊಚ್ಚಿನ್ ಯಹೂದಿಗಳು ಮತ್ತು ಪರದೇಸಿ ಯಹೂದಿಗಳು, ಮುಂಬೈ ಮತ್ತು ಕೋಲ್ಕತ್ತಾದ ಬಾಗ್ದಾದಿ ಯಹೂದಿಗಳು, ಮಹಾರಾಷ್ಟ್ರದ ಬೆನೆ ಇಸ್ರೇಲ್ ಮತ್ತು ಮಣಿಪುರ ಮತ್ತು ಮಿಜೋರಾಂನ ಬಿನೆ ಮೆನಾಶೆ ಸೇರಿದ್ದಾರೆ.

SCROLL FOR NEXT