ವಿದೇಶ

ಅಮೆರಿಕ ಅಧ್ಯಕ್ಷೀಯ ರೇಸ್‌ನಿಂದ ಹಿಂದಕ್ಕೆ ಸರಿದ ವಿವೇಕ್ ರಾಮಸ್ವಾಮಿ! ಟ್ರಂಪ್ ಗೆ ಬೆಂಬಲ ಘೋಷಣೆ

Nagaraja AB

ನ್ಯೂಯಾರ್ಕ್: ಅಯೋವಾ ಕಾಕಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಭಾರತೀಯ-ಅಮೆರಿಕನ್ ಉದ್ಯಮಿ-ರಾಜಕಾರಣಿ ವಿವೇಕ್ ರಾಮಸ್ವಾಮಿ ಸೋಮವಾರ ತಮ್ಮ ಅಧ್ಯಕ್ಷೀಯ ಪ್ರಚಾರವನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ನವೆಂಬರ್‌ನಲ್ಲಿ ಶ್ವೇತಭವನವನ್ನು ಹಿಂಪಡೆಯಲು ಯತ್ನಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷರು ಡೊನಾಲ್ಡ್ ಟ್ರಂಪ್‌ಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಅಯೋವಾ ಕಾಕಸ್ ನಲ್ಲಿ ಟ್ರಂಪ್ ಗೆಲುವು ಸಾಧಿಸಿದ್ದಾರೆ. 

ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸಭೆಯ ಫಲಿತಾಂಶದ ನಂತರ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ವಿವೇಕ್ ರಾಮಸ್ವಾಮಿ, ನಾನು ಎಲ್ಲ ರೀತಿಯಲ್ಲಿ ನೋಡಿದೆ. ನಾವು ಬಯಸಿದ ರೀತಿಯಲ್ಲಿ ಗೆಲವು ಸಾಧಿಸಲಿಲ್ಲ ಎಂದು ಭಾವಿಸುತ್ತೇನೆ. ಈ ಕ್ಷಣದಿಂದ ಅಧ್ಯಕ್ಷೀಯ ಪ್ರಚಾರವನ್ನು ಸ್ಥಗಿತಗೊಳಿಸುತ್ತೇನೆ. ಮುಂದಿನ ಅಧ್ಯಕ್ಷನಾಗಲು ಯಾವುದೇ ಮಾರ್ಗವಿಲ್ಲ ಎಂದು ಹೇಳಿದರು. 

ಮಾಜಿ ಅಧ್ಯಕ್ಷ ಟ್ರಂಪ್ ಅವರು ಅಯೋವಾ ಕಾಕಸ್ ಗೆಲ್ಲುವ ಮೂಲಕ ನವೆಂಬರ್ ನಲ್ಲಿ ಅಧ್ಯಕ್ಷೀಯ ಚುನಾವಣೆಗಳಿಗೆ ಪಕ್ಷದ ನಾಮನಿರ್ದೇಶನ ಪಡೆಯಲು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅವರು 21.2 ಶೇಕಡಾ ಮತಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದರು, ಭಾರತೀಯ-ಅಮೆರಿಕನ್ ಮಾಜಿ ಸೌತ್ ಕೆರೊಲಿನಾ ಗವರ್ನರ್ ನಿಕ್ಕಿ ಹ್ಯಾಲೆ ಅವರು 19.1 ರಷ್ಟು ಮತಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ರಾಮಸ್ವಾಮಿ ಶೇ.7.7ರಷ್ಟು ಮತಗಳನ್ನು ಪಡೆದು ನಾಲ್ಕನೇ ಸ್ಥಾನ ಗಳಿಸಿದರು. 

ಪ್ರಚಾರ ಈಗ ನ್ಯೂ ಹ್ಯಾಂಪ್‌ಶೈರ್‌ ಕಡೆಗೆ ಸಾಗಿದ್ದು,. ರಾಮಸ್ವಾಮಿ ಅವರು ಈ ರಾಜ್ಯದಲ್ಲಿ ಟ್ರಂಪ್ ಜೊತೆಗೆ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. ರಾಮಸ್ವಾಮಿ ಅವರ ಪೋಷಕರು ಕೇರಳದಿಂದ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದವರಾಗಿದ್ದು, ಓಹಿಯೋದ ಜನರಲ್ ಎಲೆಕ್ಟ್ರಿಕ್ ಸ್ಥಾವರದಲ್ಲಿ ಕೆಲಸ ಮಾಡಿದ್ದಾರೆ. ನಿಕ್ಕಿ ಹ್ಯಾಲೆ ನಂತರ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ರೇಸ್ ಪ್ರವೇಶಿಸಿದ ಎರಡನೇ ಭಾರತೀಯ-ಅಮೆರಿಕನ್ ಆಗಿದ್ದಾರೆ. 

SCROLL FOR NEXT