ಮಾಸ್ಕೋ: ಯುಕ್ರೇನ್ ನ ಕೀವ್ ನಲ್ಲಿ ಮಕ್ಕಳ ಆಸ್ಪತ್ರೆಯನ್ನು ಧ್ವಂಸಗೊಳಿಸಿರುವ ಘಟನೆಯನ್ನು ಪ್ರಧಾನಿ ಮೋದಿ ಪುಟಿನ್ ಜೊತೆಗಿನ ಮಾತುಕತೆ ವೇಳೆ ಪ್ರಸ್ತಾಪಿಸಿದ್ದಾರೆ.
ಮಕ್ಕಳು ಸಾಯುವುದು ಹೃದಯವಿದ್ರಾವಕ ಘಟನೆಯಾಗಿದೆ. ಮುಗ್ಧ ಮಕ್ಕಳ ಹತ್ಯೆಯನ್ನು ಕಂಡಾಗ ಜನರ ಹೃದಯ ಸಿಡಿಯುತ್ತದೆ ಎಂದು ಮೋದಿ ಪುಟಿನ್ ಜೊತೆಗಿನ ಮಾತುಕತೆ ವೇಳೆ ಹೇಳಿದ್ದಾರೆ.
ಮಂಗಳವಾರದಂದು ಮೋದಿ ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾಗೆ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ.
ಉಭಯ ದೇಶಗಳ ನಡುವಿನ ನಿಕಟ ಬಾಂಧವ್ಯವನ್ನು ಗುರುತಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷರಿಗೆ ಹೇಳಿದ್ದು ಇಷ್ಟು...
“ಮಹಾಮಾನ್ಯರೇ, ಯುದ್ಧ, ಯಾವುದೇ ಸಂಘರ್ಷ ಅಥವಾ ಭಯೋತ್ಪಾದಕ ಕೃತ್ಯಗಳನ್ನು ತೆಗೆದುಕೊಳ್ಳೋಣ: ಮಾನವೀಯತೆಯನ್ನು ನಂಬುವ ಯಾವುದೇ ವ್ಯಕ್ತಿ ಜನರು ಸತ್ತಾಗ ನೋವು ಅನುಭವಿಸುತ್ತಾರೆ, ಮತ್ತು ವಿಶೇಷವಾಗಿ ಮುಗ್ಧ ಮಕ್ಕಳು ಸತ್ತಾಗ ನಾವು ಅಂತಹ ನೋವನ್ನು ಅನುಭವಿಸಿದಾಗ, ಅದು ಹೃದಯ ವಿದ್ರಾವಕವಾಗಿರುತ್ತದೆ".-ಪ್ರಧಾನಿ ಮೋದಿ
ಸೋಮವಾರ ಉಕ್ರೇನ್ ಕುರಿತು ಉಭಯ ನಾಯಕರು ಪರಸ್ಪರರ ಅಭಿಪ್ರಾಯಗಳನ್ನು ಆಲಿಸಿದ್ದೇವೆ ಎಂದು ಹೇಳಿದ ಪ್ರಧಾನಿ, ಶಾಂತಿ ಮತ್ತು ಸ್ಥಿರತೆಯ ಕುರಿತು ಜಾಗತಿಕ ದಕ್ಷಿಣದ ನಿರೀಕ್ಷೆಗಳನ್ನು ಪುಟಿನ್ ಅವರ ಮುಂದೆ ಇರಿಸಿದ್ದೇವೆ ಎಂದು ಹೇಳಿದರು ಮತ್ತು "ಯುದ್ಧಭೂಮಿಯಲ್ಲಿ ಯಾವುದೇ ಪರಿಹಾರ ಸಾಧ್ಯವಿಲ್ಲ" ಎಂದು ಪುನರುಚ್ಚರಿಸಿದರು. ಹಿಂದಿನ ಸಂಜೆ ತಮ್ಮ ಖಾಸಗಿ ಔತಣಕೂಟದಲ್ಲಿ ಪ್ರಧಾನಿಯವರು ರಷ್ಯಾ ಅಧ್ಯಕ್ಷರಿಗೆ ನೀಡಿದ ಸಂದೇಶವೂ ಇದೇ ಆಗಿದೆ.
ಶಾಂತಿಯ ಮರುಸ್ಥಾಪನೆಗಾಗಿ ಭಾರತವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಕರಿಸಲು ಸಿದ್ಧವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, "ಭಾರತವು ಶಾಂತಿಯ ಪಕ್ಷದಲ್ಲಿ ಇದೆ ಎಂದು ನಾನು ನಿಮಗೆ ಮತ್ತು ವಿಶ್ವ ಸಮುದಾಯಕ್ಕೆ ಭರವಸೆ ನೀಡುತ್ತೇನೆ. ನಿನ್ನೆ ನಿಮ್ಮ ಮಾತುಗಳನ್ನು ಆಲಿಸಿದ್ದು ನನಗೆ ಭರವಸೆಯನ್ನು ನೀಡಿದೆ. ಹೊಸ ತಲೆಮಾರುಗಳು ಉಜ್ವಲ ಭವಿಷ್ಯವನ್ನು ಹೊಂದಲು, ಶಾಂತಿ ಮಾತುಕತೆಗಳು ಬಾಂಬ್‌ಗಳು, ಬಂದೂಕುಗಳು ಮತ್ತು ಗುಂಡುಗಳ ನಡುವೆ ಯಶಸ್ವಿಯಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ.