ವಿದೇಶಾಂಗ ಸಚಿವ ಎಸ್ ಜೈಶಂಕರ್
ವಿದೇಶಾಂಗ ಸಚಿವ ಎಸ್ ಜೈಶಂಕರ್ PTI
ವಿದೇಶ

ಭಾರತದ ಪ್ರದೇಶಗಳ ಮೇಲೆ ಆಕ್ರಮಣ ನಡೆಯುತ್ತಲೇ ಇದೆ, ಅದರ ವಿರುದ್ಧ ಯಾರೂ ಮಾತನಾಡಲ್ಲ: ವಿದೇಶಾಂಗ ಸಚಿವ ಜೈಶಂಕರ್

Srinivas Rao BV

ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಯುಕ್ರೇನ್- ರಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಜನರು ತಮಗೆ ಅನುಕೂಲವಾಗುವುದನ್ನು ಮಾತ್ರ ಉಲ್ಲೇಖಿಸುತ್ತಾರೆ, ತಮಗೆ ಅನುಕೂಲವಾಗದ್ದನ್ನು ಬಿಟ್ಟುಬಿಡುತ್ತಾರೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ಜಪಾನ್ ಪ್ರವಾಸದಲ್ಲಿರುವ ಜೈಶಂಕರ್, ಭಾರತ-ಜಪಾನ್ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ಭಾರತದ ಪ್ರಾಂತ್ಯಗಳನ್ನು ಬೇರೆ ದೇಶದವರು ಆಕ್ರಮಿಸಿಕೊಂಡಿದ್ದಾರೆ, ಆದರೆ ಅದರ ಬಗ್ಗೆ ಜಗತ್ತು ಮೌನ ವಹಿಸಿವೆ ಎಂದು ಹೇಳಿದ್ದಾರೆ. ಯುಕ್ರೇನ್-ರಷ್ಯಾ ಸಂಘರ್ಷದಲ್ಲಿ ರಷ್ಯಾವನ್ನು ಟೀಕಿಸದೇ ಇರುವ ಭಾರತದ ನೀತಿಯನ್ನು ದ್ವಿಮುಖ ನೀತಿ ಎಂದುಕೊಳ್ಳಬಹುದೇ? ಎಂಬ ಪ್ರಶ್ನೆಗೆ ವಿದೇಶಾಂಗ ಸಚಿವರು ಉತ್ತರಿಸುತ್ತಿದ್ದರು.

"ಜಗತ್ತು ಒಂದು ಸಂಕೀರ್ಣವಾದ ಸ್ಥಳವಾಗಿದೆ ಮತ್ತು ಜಗತ್ತಿನಲ್ಲಿ ಅನೇಕ ಪ್ರಮುಖ ತತ್ವಗಳು ಮತ್ತು ನಂಬಿಕೆಗಳಿವೆ ಎಂಬುದು ನನ್ನ ನಿಲುವು. ವಿಶ್ವ ರಾಜಕೀಯದಲ್ಲಿ ಕೆಲವೊಮ್ಮೆ ಏನಾಗುತ್ತದೆ ಎಂದರೆ ದೇಶಗಳು ಒಂದು ಸಮಸ್ಯೆಯನ್ನು, ಒಂದು ಸನ್ನಿವೇಶವನ್ನು, ಒಂದು ತತ್ವವನ್ನು ಆರಿಸಿಕೊಳ್ಳುತ್ತವೆ ಮತ್ತು ಅವರು ಅದನ್ನು ಹೈಲೈಟ್ ಮಾಡುತ್ತಾರೆ ಏಕೆಂದರೆ ಅದು ಅವರಿಗೆ ಸರಿಹೊಂದುತ್ತದೆ ಎಂಬ ಕಾರಣಕ್ಕೆ ಆಗಿರುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ.

ಈ ರೀತಿ ತಮಗೆ ಸರಿ ಹೊಂದುವುದನ್ನು ಮಾತ್ರ ಆಯ್ಕೆ ಮಾಡಿಕೊಂಡು ಉಳಿದದ್ದನ್ನು ಬಿಟ್ಟುಬಿಡುವ ತತ್ವವನ್ನು ಭಾರತ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದೆ. ಏಕೆಂದರೆ ನಮಗೆ ಸ್ವಾತಂತ್ರ್ಯ ಬಂದ ಬೆನ್ನಲ್ಲೇ ಆಕ್ರಮಣಶೀಲತೆಯನ್ನು ಅನುಭವಿಸಿದ್ದೇವೆ, ನಮ್ಮ ಗಡಿಗಳನ್ನು ಬದಲಾಯಿಸುವ ಪ್ರಯತ್ನವನ್ನು ನಾವು ಅನುಭವಿಸಿದ್ದೇವೆ. ಇದ್ಯಾವುದಕ್ಕೂ ಪ್ರಪಂಚದ ಪ್ರತಿಕ್ರಿಯೆಯನ್ನು ನಾವು ನೋಡಲಿಲ್ಲ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ. ಇದು ಯುದ್ಧದ ಯುಗ ಎಂದು ನಾವು ನಂಬುವುದಿಲ್ಲ ಮತ್ತು ಸಂಘರ್ಷವನ್ನು ಮಾತುಕತೆ ಮೂಲಕ ಪರಿಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೇಳಿದ್ದನ್ನು ಜೈಶಂಕರ್ ಪುನರುಚ್ಚರಿಸಿದರು.

SCROLL FOR NEXT