ಚೆಯಿಸ್ತಾ ಕೊಚ್ಚಾರ್‌
ಚೆಯಿಸ್ತಾ ಕೊಚ್ಚಾರ್‌  
ವಿದೇಶ

ಲಂಡನ್ ನಲ್ಲಿ ಟ್ರಕ್ ಹರಿದು ಭಾರತದ PhD ವಿದ್ಯಾರ್ಥಿನಿ ಸಾವು

Shilpa D

ಲಂಡನ್: ಗುರುಗಾಂವ್ ನ 33 ವರ್ಷದ ಪಿಎಚ್ ಡಿ ವಿದ್ಯಾರ್ಥಿನಿ ಸೈಕಲ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಪಿಎಚ್ ಡಿ ಪದವಿ ವ್ಯಾಸಂಗ ಮಾಡುತ್ತಿದ್ದರು.

ಸೈಕಲ್‌ ತುಳಿಯುತ್ತ ಮನೆಗೆ ಹಿಂತಿರುಗುತ್ತಿದ್ದ ವೇಳೆ ಟ್ರಕ್‌ ಹರಿದು 33 ವರ್ಷದ ಚೆಯಿಸ್ತಾ ಕೊಚ್ಚಾರ್‌ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್‌ 19ರಂದು ಅಪಘಾತ ಸಂಭವಿಸಿದೆ.

ಚೆಯಿಸ್ತಾ ಕೊಚ್ಚಾರ್‌ ಅವರು ನಿವೃತ್ತ ಲೆಫ್ಟಿನೆಂಟ್‌ ಜನರಲ್‌, ಸೆಲ್ಲುಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ನಿರ್ದೇಶಕ ಡಾ.ಎಸ್‌.ಪಿ. ಕೊಚ್ಚಾರ್‌ ಅವರ ಪುತ್ರಿಯಾಗಿದ್ದಾರೆ. ಚೆಯಿಸ್ತಾ ಕೊಚ್ಚಾರ್‌ ಅವರು ಲಂಡನ್‌ಗೆ ತೆರಳುವ ಮೊದಲು ನೀತಿ ಆಯೋಗದಲ್ಲೂ ಕೆಲಸ ಮಾಡಿದ್ದರು. ಇವರು ಕಳೆದ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.

ಪುತ್ರಿಯ ನಿಧನದ ಹಿನ್ನೆಲೆಯಲ್ಲಿ ಡಾ.ಎಸ್‌.ಪಿ.ಕೊಚ್ಚಾರ್‌ ಅವರು ಭಾವನಾತ್ಮಕವಾಗಿ ಪೋಸ್ಟ್‌ ಮಾಡಿದ್ದಾರೆ. “ನನ್ನ ಪುತ್ರಿಯು ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಿಂದ ಮನೆಗೆ ಹೊರಟಿದ್ದಳು. ಆಗ ಆಕೆಯ ಮೇಲೆ ಟ್ರಕ್‌ ಹರಿದಿದೆ. ನಮ್ಮೆಲ್ಲರನ್ನು ಚೆಯಿಸ್ತಾ ಕೊಚ್ಚಾರ್‌ ಅಗಲಿದ್ದಾಳೆ. ಅವಳ ನೆನಪುಗಳು ಮಾತ್ರ ನನ್ನಲ್ಲಿ ಉಳಿದಿವೆ” ಎಂದು ಭಾವುಕರಾಗಿದ್ದಾರೆ. ಮಗಳ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಚೆಯಿಸ್ತಾ ಕೊಚ್ಚಾರ್‌ ಅವರು ನೀತಿ ಆಯೋಗದಲ್ಲಿ ನನ್ನೊಂದಿಗೆ ಕಾರ್ಯನಿರ್ವಹಿಸಿದ್ದರು. ಅವರ ಕಾರ್ಯಶೈಲಿಯು ಅದ್ಭುತವಾಗಿತ್ತು. ಆದರೆ, ಲಂಡನ್‌ನಲ್ಲಿ ಅವರು ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿದು ಅತೀವ ದುಃಖವಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್‌ ಕಾಂತ್ ಪೋಸ್ಟ್‌ ಮಾಡಿದ್ದಾರೆ.

SCROLL FOR NEXT