ಇಸ್ಲಾಮಾಬಾದ್: ಭಾರತದಲ್ಲಿ ಲೋಕಸಭೆ ಚುನಾವಣೆ ಕುರಿತು ನಿರಂತರವಾಗಿ ಪ್ರತಿಕ್ರಿಯಿಸುತ್ತಿರುವ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಜಾಮೀನು ಸಿಕ್ಕಿರುವುದನ್ನು ಶ್ಲಾಘಿಸಿದ್ದು, ಇದು ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಂದು ಸೋಲು ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಮಧ್ಯಂತರ ಜಾಮೀನಿನ ನಂತರ ಕೇಜ್ರಿವಾಲ್ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು. ಇದನ್ನು ಮುಂದಿಟ್ಟುಕೊಂಡು ಫವಾದ್ ಚೌಧರಿ ಇದು ಪ್ರಧಾನಿ ಮೋದಿ ಮತ್ತೊಂದು ಯುದ್ಧದಲ್ಲಿ ಸೋತಿದ್ದಾರೆ ಎಂದು ಹೇಳುವ ಮೂಲಕ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಿದ್ದಾರೆ.
ನಾಗರಿಕ ಸಮಾಜ, ಬಾರ್ ಅಸೋಸಿಯೇಷನ್‌ಗಳು, ಮಾಧ್ಯಮ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಸಂಪೂರ್ಣವಾಗಿ ಮೌನವಾಗಿವೆ ಎಂದು ಪಾಕಿಸ್ತಾನಿ ನಾಯಕ ತಮ್ಮದೇ ದೇಶದ ಕಾನೂನಿನ ಆಡಳಿತದ ಬಗ್ಗೆ ವಿಷಾದಿಸಿದರು.
ಇಸ್ಲಾಮಾಬಾದ್‌ನ ನ್ಯಾಯಾಧೀಶರ ಐತಿಹಾಸಿಕ ನಿಲುವಿನ ಪರಿಣಾಮವಾಗಿ ನ್ಯಾಯಾಂಗವು ಸ್ತಬ್ಧವಾಗಿದೆ. ನಾಗರಿಕ ಸಮಾಜ, ವಕೀಲರ ಸಂಘಗಳು, ಮಾಧ್ಯಮ ಸಂಸ್ಥೆಗಳು, ಮಾನವ ಹಕ್ಕುಗಳ ಸಂಘಟನೆಗಳು ಸಂಪೂರ್ಣವಾಗಿ ಮೌನವಾಗಿರುವುದು ಸಮಸ್ಯೆಯಾಗಿದೆ. ಕಾನೂನಿನ ಭವಿಷ್ಯವು ಅಪಾಯದಲ್ಲಿದೆ ಎಂದು ಅವರು ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದರು.
ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು 50 ದಿನಗಳಿಗಿಂತ ಹೆಚ್ಚು ಕಾಲ ಕಳೆದ ನಂತರ ಶುಕ್ರವಾರ ತಿಹಾರ್ ಜೈಲಿನಿಂದ ಹೊರಬಂದರು. ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇಡಿ) ನಿಂದ ಬಂಧಿಸಲ್ಪಟ್ಟಿದ್ದ ಕೇಜ್ರಿವಾಲ್ ಅವರಿಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ.