ಟೆಲ್ ಅವೀವ್: ಕಳೆದ ವರ್ಷ ಹಮಾಸ್ ಭಯೋತ್ಪಾದಕರು ಅಪಹರಿಸಿದ್ದ ಐವರು ಮಹಿಳಾ ಇಸ್ರೇಲಿ ಸೈನಿಕರ ಕುಟುಂಬಗಳು ವೀಡಿಯೊವನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯ ಸಮಯದಲ್ಲಿ ಇಸ್ರೇಲ್ ನ ನಹಾಲ್ ನೆಲೆಯಲ್ಲಿ ಮಹಿಳಾ ಸೈನಿಕರನ್ನು ಸೆರೆಹಿಡಿದು ಅವರನ್ನು ಅಪಹರಿಸಿ ಗಾಜಾಕ್ಕೆ ಕರೆದೊಯ್ಯುವ ವೀಡಿಯೊ ಇದಾಗಿದೆ.
ವೀಡಿಯೊದಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಎಲ್ಲಾ ಮಹಿಳೆಯರನ್ನು ಗೋಡೆಗೆ ಮುಖ ಮಾಡಿ ನಿಲ್ಲಿಸಲಾಗಿದ್ದು ಅವರ ಕೈಗಳನ್ನು ಕಟ್ಟಲಾಗಿದೆ. ಕೆಲವು ಮಹಿಳಾ ಸೈನಿಕರಿಗೆ ಮುಖಕ್ಕೆ ಗಾಯಗಳಾಗಿದ್ದು ರಕ್ತಸಿಕ್ತವಾಗಿವೆ. 3 ನಿಮಿಷ 10 ಸೆಕೆಂಡ್‌ನ ಈ ವಿಡಿಯೋವನ್ನು ಹಮಾಸ್ ಉಗ್ರರ ಬಾಡಿ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ.
ಹಮಾಸ್ ವಶದಲ್ಲಿರುವ ಐವರು ಮಹಿಳಾ ಸೈನಿಕರ ಕುಟುಂಬಗಳು ಈ ವೀಡಿಯೊವನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿವೆ ಎಂದು ಒತ್ತೆಯಾಳು ಕುಟುಂಬಗಳ ವೇದಿಕೆ ಹೇಳಿದೆ. ಈ ಮಹಿಳಾ ಸೈನಿಕರ ಹೆಸರುಗಳು ಲಿರಿ ಅಲಬಾಗ್, ಕರೀನಾ ಅರಿವ್, ಆಗಮ್ ಬರ್ಗರ್, ಡೇನಿಯಲಾ ಗಿಲ್ಬೋವಾ ಮತ್ತು ನಾಮಾ ಲೆವಿ. ಅಕ್ಟೋಬರ್ 7ರ ದಾಳಿಯ ಸಮಯದಲ್ಲಿ, ಹಮಾಸ್ ಭಯೋತ್ಪಾದಕರು ನಹಾಲ್ ನೆಲೆಯಿಂದ 7 ಮಹಿಳಾ ಸೈನಿಕರನ್ನು ಅಪಹರಿಸಿದ್ದರು. ಒರಿ ಮೆಗಿಡಿಶ್ ಎಂಬುವರನ್ನು ಅಕ್ಟೋಬರ್‌ನಲ್ಲಿ IDF ರಕ್ಷಿಸಿತು. ಆದರೆ ನೋಹ್ ಮಾರ್ಸಿಯಾನೊ ಹಮಾಸ್‌ನಿಂದ ಸೆರೆಯಲ್ಲಿ ಹತ್ಯೆಯಾಗಿದ್ದರು. IDF ನವೆಂಬರ್‌ನಲ್ಲಿ ಅವರ ದೇಹವನ್ನು ವಶಕ್ಕೆ ಪಡೆಯಿತು.
ಹಮಾಸ್ ಉಗ್ರಗಾಮಿಗಳು ಕಣ್ಗಾವಲು ಸೈನಿಕರ ಕೈಗಳನ್ನು ಕಟ್ಟುತ್ತಿರುವುದರಿಂದ ವೀಡಿಯೊ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಮಹಿಳೆಯರ ಮುಖದಲ್ಲಿ ರಕ್ತ ಸೋರುತ್ತಿದ್ದು ಉಗ್ರರ ಬರ್ಬರತೆ ಕಾಣುತ್ತಿದೆ. ಇದೇ ವೇಳೆ ಒಬ್ಬ ಭಯೋತ್ಪಾದಕ ಮಹಿಳಾ ಸೈನಿಕರ ಕುರಿತಂತೆ 'ನಾವು ನಾಯಿಗಳನ್ನು ಹೊಡೆದು ಸಾಯಿಸುತ್ತೇವೆ' ಎಂದು ಕೂಗುತ್ತಾನೆ. ವೀಡಿಯೊದಲ್ಲಿ, ಹಮಾಸ್ ಭಯೋತ್ಪಾದಕರು ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕುತ್ತಿದ್ದಾರೆ. ಹೆಂಗಸರು ಶೆಲ್ಟರ್‌ನ ಒಳಗೆ ನೆಲದ ಮೇಲೆ ಕೈಗಳನ್ನು ಕಟ್ಟಿ ಕುಳಿತಿರುವಾಗ, ಓರ್ವ ಭಯೋತ್ಪಾದಕ ಒತ್ತೆಯಾಳುಗಳ ಕಡೆಗೆ ಕೈ ತೋರಿಸಿ 'ಇವರು ಗರ್ಭಿಣಿಯಾಗಬಹುದಾದ ಮಹಿಳೆಯರು' ಎಂದು ಹೇಳುತ್ತಾನೆ.
ಒಬ್ಬ ಭಯೋತ್ಪಾದಕ ಮಹಿಳಾ ಸೈನಿಕಳನ್ನು ನೋಡಿ ನೀವು ತುಂಬಾ ಸುಂದರವಾಗಿದ್ದೀರಿ ಎನ್ನುತ್ತಾನೆ. ಇನ್ನೊಬ್ಬರು 'ಇವರು ಯಹೂದಿಗಳು' ಎಂದು ಹೇಳುತ್ತಾರೆ. ಇದೇ ವೇಳೆ ಲಿವಿ 'ತನಗೆ ಪ್ಯಾಲೆಸ್ತೀನ್‌ನಲ್ಲಿ ಸ್ನೇಹಿತರಿದ್ದಾರೆ' ಎಂದು ಹೇಳುತ್ತಾಳೆ. ಇದಾದ ನಂತರ ಒತ್ತೆಯಾಳು ಮಹಿಳೆಯರನ್ನು ಬಾಯಿ ಮುಚ್ಚಿಕೊಂಡು ನೆಲದ ಮೇಲೆ ಕುಳಿತುಕೊಳ್ಳುವಂತೆ ಭಯೋತ್ಪಾದಕನು ಕೂಗುತ್ತಾನೆ. 'ನಿಮ್ಮಿಂದಾಗಿ ನಮ್ಮ ಸಹೋದರರು ಹತ್ಯೆಯಾಗುತ್ತಿದ್ದಾರೆ. ನಿಮ್ಮನ್ನೆಲ್ಲ ಕೊಂದುಬಿಡುತ್ತೇವೆ ಎಂದು ಮತ್ತೊಬ್ಬ ಕಿರಿಚುತ್ತಾನೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ವಿಡಿಯೋಗಳನ್ನು ನೋಡಿದ ನಂತರ ಆಘಾತಗೊಂಡಿದ್ದು ಒತ್ತೆಯಾಳುಗಳನ್ನು ಹಿಂದಿರುಗಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. 'ಹಮಾಸ್ ಭಯೋತ್ಪಾದಕರ ಕ್ರೌರ್ಯವು ನನ್ನ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದೆ, ಹಮಾಸ್ ಅನ್ನು ನಾಶಪಡಿಸುವವರೆಗೂ ನಾನು ಈ ಸಂಜೆ ನೋಡಿದ್ದನ್ನು ಮತ್ತೆ ಎಂದಿಗೂ ಸಂಭವಿಸದಂತೆ ಮಾಡಲು ನನ್ನ ಎಲ್ಲಾ ಶಕ್ತಿಯೊಂದಿಗೆ ಹೋರಾಡುತ್ತೇನೆ ಎಂದು ಅವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.