ಟೆಲ್ ಅವೀವ್: ಏಕಕಾಲದಲ್ಲಿ ಹೆಜ್ಬೊಲ್ಲಾ ಸೇರಿದಂತೆ ಹಲವು ಶತ್ರುಪಾಳಯಗಳೊಂದಿಗೆ ಯುದ್ಧ ನಡೆಸುತ್ತಿರುವ ಇಸ್ರೇಲ್ ಮತ್ತೊಂದು ಮಹತ್ವದ ಮುನ್ನಡೆ ದೊರೆತಿದ್ದು, ಇಬ್ಬರು ಹಮಾಸ್ ನಾಯಕರನ್ನು ಇಸ್ರೇಲ್ ವಾಯುಸೇನೆ ಹೊಡೆದುರುಳಿಸಿದೆ.
ಇಸ್ರೇಲ್ ಸೇನೆ ಮತ್ತು ISA (Israel Security Agency) ಜಂಟಿ ಕಾರ್ಯಾಚರಣೆ ನಡೆಸಿ ಲೆಬನಾನ್‌ನಲ್ಲಿನ ಹಮಾಸ್‌ನ ಮಿಲಿಟರಿ ವಿಭಾಗದ ಇಬ್ಬರು ಹಿರಿಯ ಭಯೋತ್ಪಾದಕರನ್ನು ಹೊಡೆದುರುಳಿಸಿದೆ.
ಮೃತ ಹಮಾಸ್ ಉಗ್ರ ನಾಯಕರನ್ನು ಮುಹಮ್ಮದ್ ಹುಸೇನ್ ಅಲಿ ಅಲ್ ಮತ್ತು ಮಹಮೂದ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಲೆಬನಾನ್‌ನಲ್ಲಿ ಹಮಾಸ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.
ಜುಡಿಯಾ ಮತ್ತು ಸಮರಿಯಾದಲ್ಲಿ ಈ ಇಬ್ಬರು ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ದೇಶಿಸಿದ್ದರು. ಲೆಬನಾನ್‌ನಲ್ಲಿ ಹಮಾಸ್‌ನ ಬೇರೂರುವಿಕೆಗೆ ಅವರು ಜವಾಬ್ದಾರರಾಗಿದ್ದರು. ಇಸ್ರೇಲ್ ವಿರುದ್ಧ ರಾಕೆಟ್ ದಾಳಿಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಲು ಮತ್ತು ಸುಧಾರಿತ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಪ್ರಯತ್ನಗಳಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು ಎಂದು ಇಸ್ರೇಲ್ ಸೇನೆ ಮಾಹಿತಿ ನೀಡಿದೆ.
ಅಲ್ಲದೆ ಇದೇ ಮುಹಮ್ಮದ್ ಹುಸೇನ್ ಅಲಿ ಅಲ್ ಇಸ್ರೇಲ್ ನಲ್ಲಿ ಭಯೋತ್ಪಾದಕ ದಾಳಿಗೆ ಯೋಜನೆ ರೂಪಿಸಿದ್ದ ಮತ್ತು ಲೆಬನಾನ್ ನಲ್ಲಿ ಇದಕ್ಕಾಗಿ ಹಮಾಸ್ ಸಂಘಟನೆಗೆ ಕಾರ್ಯಕರ್ತರನ್ನು ನೇಮಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.