ಜೆರುಸಲೇಂ: ಅಕ್ಟೋಬರ್ 7 ರ ದಾಳಿಯ ವರ್ಷಾಚರಣೆ ಮಾರನೇ ದಿನ ಬೈರುತ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಹಿರಿಯ ಕಮಾಂಡರ್ ಹತ್ಯೆಯಾಗಿರುವುದಾಗಿ ಇಸ್ರೇಲ್ ಮಿಲಿಟರಿ ಮಂಗಳವಾರ ಹೇಳಿದೆ.
ದಾಳಿಯಲ್ಲಿ ಹಿಜ್ಬೊಲ್ಲಾ ಬಂಡುಕೋರ ಸಂಘಟನೆಯ ಲಾಜಿಸ್ಟಿಕ್ಸ್, ಬಜೆಟ್ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದ್ದ ಸುಹೇಲ್ ಹುಸೇನಿ ಹತ್ಯೆಯಾಗಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ಆದರೆ, ಹಿಜ್ಬೊಲ್ಲಾದಿಂದ ತತ್ ಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಹುಸೇನಿ ಇರಾನ್‌ನಿಂದ ಸುಧಾರಿತ ಶಸ್ತ್ರಾಸ್ತ್ರಗಳನ್ನು ವರ್ಗಾಯಿಸುವಲ್ಲಿ ಮತ್ತು ಅವುಗಳನ್ನು ವಿವಿಧ ಹಿಜ್ಬುಲ್ಲಾ ಘಟಕಗಳಲ್ಲಿ ವಿತರಿಸುವಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಅವರ ಗುಂಪಿನ ಮಿಲಿಟರಿ ಕೌನ್ಸಿಲ್‌ನ ಸದಸ್ಯರಾಗಿದ್ದರು ಎಂದು ಮಿಲಿಟರಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಹಲವಾರು ಉನ್ನತ ಮಟ್ಟದ ಕಮಾಂಡರ್ ಗಳನ್ನು ಹತ್ಯೆ ಮಾಡಲಾಗಿದೆ. ಕಳೆದ ವಾರ ಇಸ್ರೇಲ್ ದಕ್ಷಿಣ ಲೆಬನಾನ್‌ಗೆ ಸೀಮಿತ ಎಂದು ಹೇಳಿ ದಾಳಿಯನ್ನು ಆರಂಭಿಸಿತ್ತು.
ಗಾಜಾ ಪಟ್ಟಿಯಲ್ಲಿ ಕದನ ವಿರಾಮದವರೆಗೆ ಇಸ್ರೇಲ್ ಮೇಲೆ ರಾಕೆಟ್, ಕ್ಷಿಪಣಿ ಮತ್ತು ಡ್ರೋನ್ ದಾಳಿ ಮಾಡುವುದಾಗಿ ಹಿಜ್ಬುಲ್ಲಾ ಪ್ರತಿಜ್ಞೆ ಮಾಡಿದೆ. ಅದರ ಮಿತ್ರ ಹಮಾಸ್ ಇಸ್ರೇಲ್‌ನೊಂದಿಗೆ ಒಂದು ವರ್ಷದಿಂದ ಯುದ್ಧ ನಡೆಸುತ್ತಿದೆ. ಈ ಮಧ್ಯೆ, ಗಾಜಾದಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳು ರಾಕೆಟ್ ದಾಳಿ ನಡೆಸಿದ್ದಾರೆ. ಗಾಜಾದಲ್ಲಿ ವಿನಾಶಕಾರಿ ಇಸ್ರೇಲಿ ಆಕ್ರಮಣದಿಂದ ಸುಮಾರು 42,000 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದು, ದೊಡ್ಡ ಪ್ರದೇಶಗಳನ್ನು ನಾಶಪಡಿಸಲಾಗಿದೆ. ಶೇ. 90 ರಷ್ಟು ಜನರು ಬೇರೆಡೆಗೆ ಸ್ಥಳಾಂತರಗೊಂಡಿರುವುದಾಗಿ ಸ್ಥಳೀಯ ವೈದ್ಯ ಅಧಿಕಾರಿಗಳು ಹೇಳಿದ್ದಾರೆ.