ಗಾಜಾ ಸಿಟಿ: ಗಾಜಾದ ಉತ್ತರದಲ್ಲಿರುವ ಜಬಾಲಿಯಾ ಬಳಿ ಇರುವ ನಿರಾಶ್ರಿತರ ಶಿಬಿರದ ಮೇಲೆ ಶುಕ್ರವಾರ ರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 33 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದಾರೆ ಮತ್ತು ಡಜನ್ಗಟ್ಟಲೆ ಜನ ಗಾಯಗೊಂಡಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಮಹ್ಮದ್ ಬಾಸ್ಸಲ್ ಹೇಳಿದ್ದಾರೆ.
ಇದಕ್ಕು ಮುನ್ನ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ತಾಲ್ ಅಲ್-ಜಾತರ್ ಶಿಬಿರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ ಮತ್ತು 70 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್-ಅವ್ದಾ ಆಸ್ಪತ್ರೆಯ ವೈದ್ಯಕೀಯ ಮೂಲಗಳು ಎಎಫ್‌ಪಿಗೆ ತಿಳಿಸಿದ್ದವು.
ಈ ಪ್ರದೇಶದಲ್ಲಿ ರಾತ್ರೋರಾತ್ರಿ ನಡೆದ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲಿ ಸೇನಾ ವಕ್ತಾರರು, "ಅದನ್ನು ಪರಿಶೀಲಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಶನಿವಾರ ಬೆಳಗ್ಗೆ ಇಸ್ರೇಲಿ ಪಡೆಗಳು, ಈ ಪ್ರದೇಶದ ಉತ್ತರ ಪಟ್ಟಣವಾದ ಬೀಟ್ ಲಾಹಿಯಾದಲ್ಲಿರುವ ಇಂಡೋನೇಷ್ಯಾದ ಆಸ್ಪತ್ರೆಯನ್ನು ಸುತ್ತುವರೆದು ಶೆಲ್ ದಾಳಿ ನಡೆಸಿವೆ ಎಂದು ಗಾಜಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
"ಇಸ್ರೇಲ್ ಟ್ಯಾಂಕ್‌ರ್ ಗಳು ಆಸ್ಪತ್ರೆಯನ್ನು ಸಂಪೂರ್ಣವಾಗಿ ಸುತ್ತುವರೆದಿವೆ. ವಿದ್ಯುತ್ ಕಡಿತಗೊಳಿಸಿವೆ ಮತ್ತು ಆಸ್ಪತ್ರೆಯ ಮೇಲೆ ಶೆಲ್ ದಾಳಿ ನಡೆಸಿವೆ. ಎರಡನೇ ಮತ್ತು ಮೂರನೇ ಮಹಡಿಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಲಾಗಿದೆ" ಎಂದು ಆಸ್ಪತ್ರೆಯ ನಿರ್ದೇಶಕ ಮರ್ವಾನ್ ಸುಲ್ತಾನ್ ಹೇಳಿದ್ದಾರೆ.
ಅಕ್ಟೋಬರ್ 6 ರಂದು, ಜಬಾಲಿಯಾ ಸೇರಿದಂತೆ ಉತ್ತರ ಗಾಜಾದಲ್ಲಿ ಇಸ್ರೇಲ್ ಹೊಸ ದಾಳಿಯನ್ನು ಆರಂಭಿಸಿತು. ಅಲ್ಲಿ ಪುನಃ ಗುಂಪುಗೂಡುತ್ತಿರುವ ಹಮಾಸ್ ಹೋರಾಟಗಾರರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಹೇಳಿದೆ.