ನವದೆಹಲಿ: ಸಂಘರ್ಷಗಳು ಮತ್ತು ಉದ್ವಿಗ್ನತೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವುದು 'ಈಗಿನ ಅಗತ್ಯ' ಎಂದು ಪ್ರತಿಪಾದಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಇತ್ಯರ್ಥಪಡಿಸಬೇಕು ಮತ್ತು ಒಮ್ಮೆ ಮಾಡಿಕೊಳ್ಳಲಾದ ಒಪ್ಪಂದಗಳನ್ನು 'ಸೂಕ್ಷ್ಮವಾಗಿ ಗೌರವಿಸಬೇಕು' ಎಂದು ಹೇಳಿದ್ದಾರೆ.
ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಔಟ್ರೀಚ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.
ನಾವು ಸಂಕಷ್ಟದ ಸಂದರ್ಭಗಳಲ್ಲಿ ಭೇಟಿಯಾಗುತ್ತೇವೆ. ದೀರ್ಘಾವಧಿಯ ಸವಾಲಿನ ಬಗ್ಗೆ ಹೊಸದಾಗಿ ಯೋಚಿಸಲು ಜಗತ್ತು ಸಿದ್ಧವಾಗಿರಬೇಕು. ನಮ್ಮ ಸಭೆಯು ನಾವು ನಿಜವಾಗಿಯೂ ಹಾಗೆ ಮಾಡಲು ಸಿದ್ಧರಿದ್ದೇವೆ ಎಂಬ ಸಂದೇಶವಾಗಿದೆ, ”ಜೈಶಂಕರ್ ಹೇಳಿದರು.
ತಮ್ಮ ಭಾಷಣದಲ್ಲಿ, 'ಇದು ಯುದ್ಧದ ಕಾಲವಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಹೇಳಿದ ಮಾತುಗಳನ್ನೂ ಜೈಶಂಕರ್ ಉಲ್ಲೇಖಿಸಿದ್ದಾರೆ.
"ಘರ್ಷಣೆಗಳು ಮತ್ತು ಉದ್ವಿಗ್ನತೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವುದು ಇಂದಿನ ಅಗತ್ಯವಾಗಿದೆ. ಇದು ಯುದ್ಧದ ಯುಗವಲ್ಲ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದ್ದರು. ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯಿಂದ ಇತ್ಯರ್ಥಪಡಿಸಿಕೊಳ್ಳಬೇಕು. ಒಪ್ಪಂದಗಳನ್ನು ಒಮ್ಮೆ ತಲುಪಿದರೆ, ಅದನ್ನು ಸೂಕ್ಷ್ಮವಾಗಿ ಗೌರವಿಸಬೇಕು." ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.
ವಿನಾಯಿತಿ ಇಲ್ಲದೆ ಅಂತರರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರಬೇಕು. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಬ್ರಿಕ್ಸ್ ಔಟ್ರೀಚ್ ಅಧಿವೇಶನದಲ್ಲಿ ಜೈಶಂಕರ್ ಹೇಳಿದ್ದಾರೆ.
'ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯು ಅರ್ಥವಾಗುವ ಕಳವಳವಾಗಿದೆ ಮತ್ತು ಈ ಪ್ರದೇಶದಲ್ಲಿ ಸಂಘರ್ಷವು ಮತ್ತಷ್ಟು ಹರಡುತ್ತದೆ ಎಂಬ ವ್ಯಾಪಕ ಆತಂಕವಿದೆ' ಎಂದೂ ಜೈಶಂಕರ್ ಹೇಳಿದ್ದಾರೆ.
ಬ್ರಿಕ್ಸ್ ಶೃಂಗಸಭೆಯ ಅಂತಿಮ ದಿನದಂದು ಇಲ್ಲಿ ನಡೆದ ಔಟ್ ರೀಚ್/ಬ್ರಿಕ್ಸ್ ಪ್ಲಸ್ ಸಭೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಯೋಜಿಸಿದ್ದರು.
ಅಧಿವೇಶನದಲ್ಲಿ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್, 30 ಕ್ಕೂ ಹೆಚ್ಚು ನಿಯೋಗಗಳು 20 ಕ್ಕೂ ಹೆಚ್ಚು ವಿಶ್ವ ನಾಯಕರು ಭಾಗವಹಿಸಿದ್ದರು.