ತಾಲಿಸೇ: ಫಿಲಿಪೈನ್ಸ್‌ನಲ್ಲಿ ಟ್ರಾಮಿ ಚಂಡಮಾರುತದಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಮತ್ತು ಭೂಕುಸಿತಗಳಲ್ಲಿ ಮೃತಪಟ್ಟವರ ಮತ್ತು ಕಾಣೆಯಾದವರ ಸಂಖ್ಯೆ 100ಕ್ಕೂ ಹೆಚ್ಚಾಗಿದೆ ಎಂದು ಫಿಲಿಫೈನ್ಸ್ ಅಧ್ಯಕ್ಷರು ಶನಿವಾರ ಹೇಳಿದ್ದಾರೆ.
ಶುಕ್ರವಾರ ವಾಯುವ್ಯ ಫಿಲಿಪೈನ್ಸ್‌ನಲ್ಲಿ ಸೃಷ್ಟಿಯಾದ ಟ್ರಾಮಿ ಚಂಡಮಾರುತ, ಗಂಟೆಗೆ 95 ಕಿ.ಮೀ ವೇಗದಲ್ಲಿ ಅಪ್ಪಳಿಸಿದ್ದು, ವ್ಯಾಪಕ ನಷ್ಟ ಉಂಟು ಮಾಡಿದೆ.
ಈ ವರ್ಷ ಇದುವರೆಗೆ ಆಗ್ನೇಯ ಏಷ್ಯಾದ ದ್ವೀಪಸಮೂಹದ ಮಾರಣಾಂತಿಕ ಮತ್ತು ಅತ್ಯಂತ ವಿನಾಶಕಾರಿ ಚಂಡಮಾರುತದಿಂದ ಕನಿಷ್ಠ 81 ಜನ ಸಾವನ್ನಪ್ಪಿದ್ದಾರೆ ಮತ್ತು 34 ಜನರು ಕಾಣೆಯಾಗಿದ್ದಾರೆ ಎಂದು ಸರ್ಕಾರದ ವಿಪತ್ತು-ಪ್ರತಿಕ್ರಿಯೆ ಸಂಸ್ಥೆ ತಿಳಿಸಿದೆ.
ಹಲವು ಕಡೆ ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಮನೆಯ ಛಾವಣಿಯಲ್ಲಿ ಸಿಕ್ಕಿಬಿದ್ದಿರುವ ಜನರನ್ನು ಮೋಟಾರು ಬೋಟ್‍ಗಳ ಮೂಲಕ ತೆರವುಗೊಳಿಸಲಾಗಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಲುಝೋನ್ ದ್ವೀಪದಲ್ಲಿ ಶಾಲೆಗಳು ಹಾಗೂ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ.
ಪ್ರವಾಹ ಪೀಡಿತ ಮನಿಲಾದ ಆಗ್ನೇಯದ ಮತ್ತೊಂದು ಪ್ರದೇಶವನ್ನು ಶನಿವಾರ ಪರಿಶೀಲಿಸಿದ ಫಿಲಿಫೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಅವರು, ಚಂಡಮಾರುತದಿಂದ ಭಾರಿ ದೊಡ್ಡ ಪ್ರಮಾಣದ ಮಳೆಯಾಗಿದೆ, ಕೇವಲ 24 ಗಂಟೆಗಳಲ್ಲಿ ಎರಡು ತಿಂಗಳ ಪ್ರಮಾಣದ ಮಳೆಯಾಗಿದೆ ಎಂದು ಹೇಳಿದ್ದಾರೆ.
ಈ ಚಂಡಮಾರುತದಿಂದ 2 ದಶಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. 75,400 ಗ್ರಾಮಸ್ಥರನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.