ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಪ್ರಮುಖ ಟೆಕ್ ಕಂಪನಿಗಳ ಸಿಇಒಗಳೊಂದಿಗೆ ಫಲಪ್ರದ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದರು, ಭಾರತದ ಬೆಳವಣಿಗೆಯ ನಿರೀಕ್ಷೆಗಳಿಗೆ ಒತ್ತು ನೀಡಿ ನಡೆಸಿದ ಸಂವಾದದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಯೋಗವನ್ನು ಉತ್ತೇಜಿಸುವ ಉಪಕ್ರಮಗಳನ್ನು ಚರ್ಚಿಸಿದರು.
ಮೋದಿಯವರ ಮೂರು ದಿನಗಳ ಅಮೇರಿಕಾ ಪ್ರವಾಸದ ಎರಡನೇ ದಿನವಾದ ನಿನ್ನೆ ಭಾನುವಾರ ಲೊಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್‌ನಲ್ಲಿ ಈ ಸಭೆ ನಡೆಯಿತು. ಇದು AI, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಕೆಲಸ ಮಾಡುವ ಪ್ರಮುಖ ಅಮೆರಿಕ-ಆಧಾರಿತ ಸಂಸ್ಥೆಗಳ ಸಿಇಒಗಳು ಭಾಗವಹಿಸಿದ್ದರು.
ನ್ಯೂಯಾರ್ಕ್‌ನಲ್ಲಿ ಟೆಕ್ ಸಿಇಒಗಳೊಂದಿಗೆ ಫಲಪ್ರದ ದುಂಡುಮೇಜಿನ ಸಭೆ ನಡೆಸಿ, ತಂತ್ರಜ್ಞಾನ, ನಾವೀನ್ಯತೆ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಾಗಿದೆ. ಈ ಕ್ಷೇತ್ರದಲ್ಲಿ ಭಾರತ ಮಾಡಿರುವ ಮಹತ್ವದ ಸಾಧನೆಗಳನ್ನು ಎತ್ತಿ ತೋರಿಸಲಾಗಿದೆ. ಈ ಮೂಲಕ ಭಾರತದ ಬಗ್ಗೆ ಅಪಾರವಾದ ಆಶಾವಾದ ಇನ್ನಷ್ಟು ಹೆಚ್ಚಾಗಿದೆ ಎಂದು ಮೋದಿಯವರು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸ್ಕೂಲ್ ಆಫ್ ಇಂಜಿನಿಯರಿಂಗ್ ಆಯೋಜಿಸಿದ್ದು, ಗೂಗಲ್ ಸಿಇಒ ಪಿಚೈ ಮತ್ತು ಅಡೋಬ್ ಸಿಇಒ ಶಾಂತನು ನಾರಾಯಣ ಸೇರಿದಂತೆ ಉನ್ನತ ಯುಎಸ್ ಟೆಕ್ ಸಂಸ್ಥೆಗಳ ಸಿಇಒಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಪ್ರಧಾನಮಂತ್ರಿಯವರು ಭಾರತದ ಬೆಳವಣಿಗೆಯ ನಿರೀಕ್ಷೆಗಳಿಗೆ ಒತ್ತು ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಹಯೋಗ ಮತ್ತು ನಾವೀನ್ಯತೆಗಳನ್ನು ಉತ್ತೇಜಿಸುವ ಉಪಕ್ರಮಗಳನ್ನು ಚರ್ಚಿಸಿದರು ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ಖಾತೆಯು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.
ಅದಕ್ಕೆ ಹಿಂದಿನ ದಿನ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ತುಂಬಿದ ನಸ್ಸೌ ವೆಟರನ್ಸ್ ಕೊಲಿಜಿಯಂನಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮೋದಿಯವರು ಮಾತನಾಡಿದ್ದರು. ಶನಿವಾರ ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿ ಅಧ್ಯಕ್ಷ ಜೋ ಬೈಡನ್ ಆಯೋಜಿಸಿದ್ದ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಮೋದಿಯವರು ನಿನ್ನೆ ಭಾನುವಾರ ನ್ಯೂಯಾರ್ಕ್ ತಲುಪಿದರು.
ಸೆಮಿಕಂಡಕ್ಟರ್ ಮತ್ತು ಚಿಪ್ ತಯಾರಿಕೆ ಬಗ್ಗೆ ನಾವು ರೂಪಿಸಿದ ನೀತಿಗೆ ಭಾರತದಲ್ಲಿ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಕ್ಷೇತ್ರದಲ್ಲಿರುವವರು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರಿದ್ದಾರೆ. ಭಾರತದಲ್ಲಿ ಚಿಪ್ ಡಿಸೈನ್ಗೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಜಾಗತಿಕ ಸೆಮಿಕಂಡಕ್ಟರ್ನ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಭಾರತವೂ ಪ್ರಮುಖ ಭಾಗವಾಗಬಲ್ಲುದು ಎಂದು ಮೋದಿ ಹೇಳಿದರು.
ಭಾರತದಲ್ಲಿ ಪ್ರತಿಭೆಗಳು ಸಾಕಷ್ಟಿದ್ದಾರೆ. ಬೆಳೆಯುತ್ತಿರುವ ಮಾರುಕಟ್ಟೆ ಇದೆ. ಪ್ರಜಾತಾಂತ್ರಿಕ ಚೌಕಟ್ಟು ಇದೆ. ಈ ಮೂರು ಸಂಯೋಜನೆಯ ವಾತಾವರಣ ಹೊಂದಿರುವ ಭಾರತವು ಹೂಡಿಕೆದಾರರಿಗೆ ಅಪೂರ್ವ ಅವಕಾಶ ಒದಗಿಸುತ್ತದೆ ಎಂದು ಭಾರತದ ಪ್ರಧಾನಿ ಅಭಿಪ್ರಾಯಪಟ್ಟರು.
ನೀವೆಲ್ಲಾ ಭಾರತ ಹಾಗೂ ಇತರ ಜಾಗತಿಕ ಪಾಲುದಾರರ ಜೊತೆ ಕೆಲಸ ಮಾಡಿದ್ದೀರಿ. ಭಾರತ ಹಾಗೂ ಇತರ ದೇಶಗಳನ್ನು ನೀವು ಹೋಲಿಕೆ ಮಾಡಿ ನೋಡಬಹುದು. ಯಾವುದೇ ದೇಶವಾದರೂ ರಾಜಕೀಯ ಸ್ಥಿರತೆ ಬಹಳ ಮುಖ್ಯ. ಈ ವಿಚಾರದಲ್ಲಿ ಭಾರತ ಮೇಲುಗೈ ಹೊಂದಿದೆ ಎಂದು ಮೋದಿ ಈ ಟೆಕ್ ಸಿಇಒಗಳ ಸಭೆಯಲ್ಲಿ ತಿಳಿಸಿದರು.