ಮಾಸ್ಕೋ: ಪಹಲ್ಗಾಮ್ ಭಯೋತ್ಪಾದಕ ದಾಳಿ ವಿಚಾರವಾಗಿ ಜಗತ್ತಿನಾದ್ಯಂತ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಇದೀಗ ಹೊಸ ಆಟ ಆರಂಭಿಸಿದ್ದು, ಉಗ್ರ ದಾಳಿ ತನಿಖೆಯಲ್ಲಿ ರಷ್ಯಾ ಮತ್ತು ಚೀನಾ ಪಾಲ್ಗೊಳ್ಳ ಬೇಕು ಎಂದು ಆಗ್ರಹಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ಮಂಗಳವಾರ ಭಯೋತ್ಪಾದಕರು ದಾಳಿ ಮಾಡಿ 26 ಮಂದಿ ಪ್ರವಾಸಿಗರನ್ನು ಕೊಂದು ಹಾಕಿದ್ದರು. 2019 ರಲ್ಲಿ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ಉಗ್ರ ದಾಳಿ ಇದಾಗಿದೆ. ನಿಷೇಧಿತ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ನ ಅಂಗ ಸಂಸ್ಥೆ ರೆಸಿಸ್ಟೆನ್ಸ್ ಫ್ರಂಟ್ (TRF) ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.
ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತ ಸರ್ಕಾರ ಪಹಲ್ಗಾಮ್ ದಾಳಿಯ "ದುಷ್ಕರ್ಮಿಗಳು ಮತ್ತು ಪಿತೂರಿಗಾರರಿಗೆ" ಅತ್ಯಂತ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಹೇಳಿತ್ತು.
ತನಿಖೆಯಲ್ಲಿ ರಷ್ಯಾ, ಚೀನಾ ಪಾಲ್ಗೊಳ್ಳುವಿಕೆಗೆ ಪಾಕಿಸ್ತಾನ ಆಗ್ರಹ
ಇನ್ನು ಪಹಲ್ಗಾಮ್ ಉಗ್ರ ದಾಳಿ ವಿಚಾರವಾಗಿ ನಡೆಯುವ ತನಿಖೆಯಲ್ಲಿ ರಷ್ಯಾ, ಚೀನಾ ಪಾಲ್ಗೊಳ್ಳಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ.
ರಷ್ಯಾ ಸರ್ಕಾರ ನಡೆಸುವ ಆರ್‌ಐಎ ನೊವೊಸ್ಟಿ ಸುದ್ದಿ ಸಂಸ್ಥೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮಾತನಾಡಿ, "ಈ ಬಿಕ್ಕಟ್ಟಿನಲ್ಲಿ ರಷ್ಯಾ ಅಥವಾ ಚೀನಾ ಅಥವಾ ಪಾಶ್ಚಿಮಾತ್ಯ ದೇಶಗಳು ಸಹ ತುಂಬಾ ಸಕಾರಾತ್ಮಕ ಪಾತ್ರವನ್ನು ವಹಿಸಬಹುದು ಎಂದು ನಾನು ಭಾವಿಸುತ್ತೇನೆ ಮತ್ತು ಅವರು ತನಿಖಾ ತಂಡವನ್ನು ಸ್ಥಾಪಿಸಬಹುದು, ಭಾರತ ಅಥವಾ ಮೋದಿ ಸುಳ್ಳು ಹೇಳುತ್ತಿದ್ದಾರೆಯೇ ಅಥವಾ ಅವರು ಸತ್ಯವನ್ನು ಹೇಳುತ್ತಿದ್ದಾರೆಯೇ ಎಂದು ತನಿಖೆ ಮಾಡಲು ಈ ಕೆಲಸವನ್ನು ನಿಯೋಜಿಸಬೇಕು. ಅಂತರರಾಷ್ಟ್ರೀಯ ತಂಡವು ಅದನ್ನು ಕಂಡುಹಿಡಿಯಲಿ ಎಂದು ಆಗ್ರಹಿಸಿದರು.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಅಂತಾರಾಷ್ಟ್ರೀಯ ತನಿಖೆ ನಡೆಸಲು ಪ್ರಸ್ತಾಪಿಸಿದ್ದಾರೆ ಎಂದು ಅವರು ಹೇಳಿದರು.
"ಭಾರತದಲ್ಲಿ, ಕಾಶ್ಮೀರದಲ್ಲಿ ಈ ಘಟನೆಯ ಅಪರಾಧಿ ಯಾರು ಎಂಬುದನ್ನು ಕಂಡುಹಿಡಿಯೋಣ, ಮಾತು ಅಥವಾ ಖಾಲಿ ಹೇಳಿಕೆಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಪಾಕಿಸ್ತಾನ ಭಾಗಿಯಾಗಿದೆ ಅಥವಾ ಈ ಜನರು ಪಾಕಿಸ್ತಾನದಿಂದ ಬೆಂಬಲಿತರಾಗಿದ್ದಾರೆ ಎಂಬುದಕ್ಕೆ ಕೆಲವು ಪುರಾವೆಗಳು ಇರಬೇಕು. ಇವು ಕೇವಲ ಖಾಲಿ ಹೇಳಿಕೆಗಳು ಮತ್ತು ಇನ್ನೇನೂ ಅಲ್ಲ" ಎಂದು ಖವಾಜಾ ಹೇಳಿಕೆಯನ್ನು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಏತನ್ಮಧ್ಯೆ, ಮಾಸ್ಕೋ ಮೂಲದ ಸ್ವತಂತ್ರ ಅಮೆರಿಕ ವಿಶ್ಲೇಷಕ ಆಂಡ್ರ್ಯೂ ಕೊರಿಬ್ಕೊ ಕೂಡ ಈ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನವು ಭಾರತದ ಆರೋಪವನ್ನು ನಿರಾಕರಿಸಿದೆ. ಅದು ನಿರೀಕ್ಷಿತವಾಗಿತ್ತು, ಆದರೆ ಉನ್ನತ ಅಧಿಕಾರಿಗಳು ಆಶ್ಚರ್ಯಕರವಾಗಿ ಎರಡು ಕ್ಷುಲ್ಲಕ ಹೇಳಿಕೆಗಳನ್ನು ನೀಡಿದ್ದು, ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ದಾಳಿ ನಡೆಸಿದವರು ಸ್ವಾತಂತ್ರ್ಯ ಹೋರಾಟಗಾರರಾಗಿರಬಹುದು ಎಂದು ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರಾಗಿ ಇಶಾಕ್ ದಾರ್ ಟೀಕಿಸಿದ್ದಾರೆ ಎಂದರು.
ಅಂತೆಯೇ ಕಾಶ್ಮೀರ ಸಂಘರ್ಷದ ಬಗ್ಗೆ ಯಾರ ಅಭಿಪ್ರಾಯಗಳು ಏನೇ ಇರಲಿ, ಪ್ರವಾಸಿಗರನ್ನು ಹತ್ಯೆ ಮಾಡುವುದು ನಿರ್ವಿವಾದದ ಭಯೋತ್ಪಾದನಾ ಕೃತ್ಯ, ಇಂತಹ ದುಷ್ಕೃತ್ಯಗಳನ್ನು ಅವರ ಧರ್ಮದ ಆಧಾರದ ಮೇಲೆ ಉಲ್ಲೇಖಿಸಬಾರದು ಮತ್ತು ಸಮರ್ಥಿಸಿಕೊಳ್ಳಬಾರದು ಎಂದು ಕೊರಿಬ್ಕೊ ಹೇಳಿದ್ದಾರೆ.
ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ
ಇದೇ ವೇಳೆ ಅಪರಾಧಿಗಳು 'ಸ್ವಾತಂತ್ರ್ಯ ಹೋರಾಟಗಾರರಾಗಿರಬಹುದು' ಎಂದು ಊಹಿಸುವುದು ಪ್ರಪಂಚದಾದ್ಯಂತದ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಖ್ಯಾತಿಗೊಳಿಸುತ್ತದೆ ಮತ್ತು ಭಯೋತ್ಪಾದನೆಯನ್ನು ಮೌನವಾಗಿ ಸಮರ್ಥಿಸುತ್ತದೆ. "ದಾರ್ ಮತ್ತು ಆಸಿಫ್ ಹೇಳಿದ್ದನ್ನು ಹೆಚ್ಚು ಪರಿಶೀಲಿಸಿದಾಗ, ವೀಕ್ಷಕರು ಸ್ಪಷ್ಟವಾದ ವಿರೋಧಾಭಾಸವನ್ನು ಗಮನಿಸುತ್ತಾರೆ, ಮೊದಲನೆಯವರು ಪಹಲ್ಗಾಮ್ ದಾಳಿಯನ್ನು ಬಲವಾಗಿ ಅನುಮೋದಿಸಿದ್ದಾರೆ, ಅಪರಾಧಿಗಳು 'ಸ್ವಾತಂತ್ರ್ಯ ಹೋರಾಟಗಾರರಾಗಿರಬಹುದು' ಎಂದು ಊಹಿಸಿದರೆ, ಎರಡನೆಯವರು ದಾಳಿಯನ್ನು ಬಲವಾಗಿ ನಿರಾಕರಿಸುತ್ತಾರೆ ಮತ್ತು ಅದನ್ನೆಲ್ಲ ಭಾರತದ ಮೇಲೆ ದೂಷಿಸುತ್ತಿದ್ದಾರೆ ಎಂದು ಕೊರಿಬ್ಕೊ ಆನ್‌ಲೈನ್ ವೇದಿಕೆಯಾದ 'ಸಬ್‌ಸ್ಟ್ಯಾಕ್' ನಲ್ಲಿ ಹೇಳಿದ್ದಾರೆ.