ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿ ಪೈಶಾಚಿಕ ಕೃತ್ಯದ ಬಳಿಕ ಭಾರತದ ಪ್ರತೀಕಾರ ದಾಳಿಯ ಭೀತಿಯಲ್ಲಿರುವ ಪಾಕಿಸ್ತಾನ, ಇಸ್ಲಾಮಾಬಾದ್, ಲಾಹೋರ್‌ನಲ್ಲಿ ನೋ ಫ್ಲೈ ಝೋನ್ (ಹಾರಾಯ ನಿಷೇಧ ವಲಯ) ಘೋಷಣೆ ಮಾಡಿದೆ.
ಮೇ 2 ರವರೆಗೆ ಇಸ್ಲಾಮಾಬಾದ್ ಮತ್ತು ಲಾಹೋರ್‌ಗೆ ವಾಯುಪಡೆ (NOTAM) ನೋಟಿಸ್ ವಿಧಿಸಲಾಗಿದ್ದು, ಗೊತ್ತುಪಡಿಸಿದ ವಾಯುಪ್ರದೇಶದಲ್ಲಿ ಯಾವುದೇ ವಿಮಾನಗಳು ಕಾರ್ಯನಿರ್ವಹಿಸಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ಭಯೋತ್ಪಾದಕ ದಾಳಿಗೆ ಭಾರತ ಬಲವಾದ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಆತಂಕಕ್ಕೊಳಗಾಗಿದ್ದು, ಇದರಂತೆ ಇಸ್ಲಾಮಾಬಾದ್ ಮತ್ತು ಲಾಹೋರ್ ವಾಯುಪ್ರದೇಶದಲ್ಲಿ ನೋ ಫ್ಲೈ ಝೋನ್ ಘೋಷಣೆ ಮಾಡಿದೆ.
ಭಾರತದ ದಾಳಿಯ ಭೀತಿಯಲ್ಲಿರುವ ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಮಧ್ಯರಾತ್ರಿೋ 2 ಗಂಟೆಗೆ ಹೇಳಿಕೆ ಬಿಡುಗಡೆ ಮಾಡಿದ್ದರು.
ಹೇಳಿಕೆಯಲ್ಲಿ "ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂಬ ಆಧಾರರಹಿತ ಮತ್ತು ಕಪೋಲಕಲ್ಪಿತ ಆರೋಪಗಳ ನೆಪದಲ್ಲಿ ಭಾರತ ಮುಂದಿನ 24-36 ಗಂಟೆಗಳಲ್ಲಿ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಲು ಉದ್ದೇಶಿಸಿದೆ ಎಂಬ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಪಾಕಿಸ್ತಾನಕ್ಕೆ ಇದೆ" ಎಂದು ಹೇಳಿದ್ದರು.
ಪಹಲ್ಗಾಮ್ ದಾಳಿಯ ಕುರಿತು "ತಟಸ್ಥ ಆಯೋಗದಿಂದ ವಿಶ್ವಾಸಾರ್ಹ, ಪಾರದರ್ಶಕ ಮತ್ತು ಸ್ವತಂತ್ರ ತನಿಖೆಗೆ" ಇಸ್ಲಾಮಾಬಾದ್ ಸಹಕರಿಸಲು ಸಿದ್ಧವಾಗಿದೆ ಎಂದು ಸಚಿವ ಹೇಳಿದ್ದು, ಭಾರತದ ಯಾವುದೇ ಮಿಲಿಟರಿ ಸಾಹಸಕ್ಕೆ ಖಚಿತವಾಗಿ ಮತ್ತು ನಿರ್ಣಾಯಕವಾಗಿ ಪ್ರತಿಕ್ರಿಯಿಸಲಾಗುವುದು ಎಂದು ಪಾಕಿಸ್ತಾನ ಪುನರುಚ್ಚರಿಸುತ್ತದೆ. ಅಂತರರಾಷ್ಟ್ರೀಯ ಸಮುದಾಯವು ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದರು.
ಏಪ್ರಿಲ್ 22ರಂದು ನಡೆದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಯ (Pahalgam Terror Attack) ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ಮಂಗಳವಾರ ನಡೆಯಿತು.
ಸಭೆಯಲ್ಲಿ 'ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆಯ ವಿಧಾನ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ "ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ" ಇದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಅಂತೆಯೇ ಸಶಸ್ತ್ರ ಪಡೆಗಳ ವೃತ್ತಿಪರ ಸಾಮರ್ಥ್ಯಗಳಲ್ಲಿ ಮೋದಿ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸ ವ್ಯಕ್ತಪಡಿಸಿದ್ದರು. ಭಾರತದ ಈ ನಡೆ ಬೆನ್ನಲ್ಲೇ ಪಾಕಿಸ್ತಾನಕ್ಕೆ ಪ್ರತೀಕಾರದ ದಾಳಿ ಕುರಿತು ಆತಂಕ ಶುರುವಾಗಿದೆ.