ನವದೆಹಲಿ: ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಶೇ.25ರಷ್ಟು ತೆರಿಗೆ ಆ.7ರಿಂದ ಜಾರಿಯಾಗಲಿದೆ. ಇದರಿಂದ, ಅಮೆರಿಕನ್ನರು ಖರೀದಿಸುವ ಭಾರತೀಯ ಉತ್ಪನ್ನಗಳು ದುಬಾರಿಯಾಗಲಿವೆ.
ಅತ್ತ, ರಷ್ಯಾ ದಿಂದ ಶಸ್ತ್ರಾಸ್ತ್ರ ಮತ್ತು ತೈಲವನ್ನು ತರಿಸಿಕೊಳ್ಳುತ್ತಿರುವುದಕ್ಕೆ ದಂಡ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರಾದರೂ, ಅದರ ಮೊತ್ತವನ್ನು ಇನ್ನೂ ಘೋಷಿಸಿಲ್ಲ. ಈ ಪರಿಣಾಮ ಅಮೆರಿಕದಲ್ಲಿ ಭಾರತದ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಆರ್ಥಿಕತೆ ಮೇಲೆ ಪರಿಣಾಮದ ಸಾಧ್ಯತೆ ಇದೆ.
ಭಾರತದ ಜತೆಗಿನ ವ್ಯಾಪಾರ ಒಪ್ಪಂದ ಮಾತುಕತೆ ನಿರೀಕ್ಷಿತ ಪ್ರಗತಿ ಸಾಧಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಭವನ ಪ್ರಕಟಿಸಿದೆ.
ಆಗಸ್ಟ್ 7ರಿಂದ ಹೊಸ ಸುಂಕ ಜಾರಿಗೆ ಬರಲಿದ್ದು, 70 ದೇಶಗಳು ಹಾಗೂ ಯೂರೋಪಿಯನ್ ಒಕ್ಕೂಟದ 27 ಸದಸ್ಯ ದೇಶಗಳಿಗೆ ಇದು ಅನ್ವಯವಾಗಲಿದೆ. ಈ ಆದೇಶದಲ್ಲಿ ಹೆಸರಿಸದ ದೇಶಗಳು ನಿಗದಿತ ಶೇಕಡ 10ರ ಸುಂಕ ಎದುರಿಸಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಲಾಗಿದೆ.
ಯುರೋಪಿಯನ್ ಒಕ್ಕೂಟಕ್ಕೆ ಶೇ.15 ಕ್ಕಿಂತ ಹೆಚ್ಚಿನ ಅಮೆರಿಕಾ ಸುಂಕ ದರಗಳನ್ನು ಹೊಂದಿರುವ ಸರಕುಗಳಿಗೆ ಹೊಸ ಸುಂಕಗಳಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ, ಶೇ.15ಕ್ಕಿಂತ ಕಡಿಮೆ ಸುಂಕ ದರಗಳನ್ನು ಹೊಂದಿರುವ ಸರಕುಗಳ ತೆರಿಗೆಗಳನ್ನು ಪ್ರಸ್ತುತ ಸುಂಕ ದರದಿಂದ ಶೇ.15ರಷ್ಟು ಕಡಿಮೆ ಮಾಡಲು ಹೊಂದಿಸಲಾಗುತ್ತದೆ ಎಂದು ತಿಳಿಸಿದೆ.
ಹೊಸ ಸುಂಕಗಳನ್ನು ಜಾರಿಗೆ ತರುವ ಮೊದಲು ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲು ಟ್ರಂಪ್ ಆರಂಭದಲ್ಲಿ ಆಗಸ್ಟ್ 1ರ ಗಡುವನ್ನು ನಿಗದಿಪಡಿಸಿದ್ದರು. ಈಗ ಪರಿಷ್ಕೃತ ಪಾರಸ್ಪರಿಕ ಸುಂಕಗಳನ್ನು ಎದುರಿಸುತ್ತಿರುವ 70ಕ್ಕೂ ಹೆಚ್ಚು ದೇಶಗಳಿಗೆ, ಆದೇಶಕ್ಕೆ ಸಹಿ ಹಾಕಿದ ಏಳು ದಿನಗಳ ನಂತರ ಹೊಸ ದರಗಳು ಜಾರಿಗೆ ಬರುತ್ತವೆ ಎಂದು ತಿಳಿಸಲಾಗಿದೆ.
ಆದಾಗ್ಯೂ, ಇಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದ್ದು. ಆಗಸ್ಟ್ 7 ರೊಳಗೆ ಹಡಗುಗಳಿಗೆ ಲೋಡ್ ಮಾಡಲಾದ ಮತ್ತು ಅಕ್ಟೋಬರ್ 5 ರೊಳಗೆ ಅಮೆರಿಕವನ್ನು ತಲುಪುವ ಸರಕುಗಳು ಹೊಸ ದರಗಳಿಗೆ ಒಳಪಡುವುದಿಲ್ಲ ಎಂದು ತಿಳಿಸಲಾಗಿದೆ.
ಆದೇಶಕ್ಕೆ ಸಹಿ ಹಾಕುವ ವೇಳೆ ಮಾತನಾಡಿರುವ ಟ್ರಂಪ್ ಅವರು, ರ್ಷಗಳಿಂದ ನಡೆಯುತ್ತಿರುವ ವ್ಯಾಪಾರ ಅಸಮತೋಲನ ತೆಗೆದುಹಾಕಲು ಮತ್ತು ಅಮೆರಿಕದ ಆರ್ಥಿಕ ಭದ್ರತೆ ಬಲಪಡಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕೆನಡಾ ಜೊತೆಗೆ ಇತರ ಹಲವಾರು ದೇಶಗಳಿಗೆ ನವೀಕರಿಸಿದ ಸುಂಕ ದರಗಳನ್ನು ಅಮೆರಿಕ ಬಿಡುಗಡೆ ಮಾಡಿದೆ. ಕೆನಡಾ ಮೇಲೆ ಸದ್ಯ ಶೇ.25ರಷ್ಟು ಸುಂಕ ವಿಧಿಸಲಾಗುತ್ತಿದ್ದು, ಅದನ್ನು ಶೇ.35ಗೆ ಹೆಚ್ಚಿಸಲಾಗುತ್ತದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಈ ಆದೇಶದ ಅಡಿಯಲ್ಲಿ, ಪಾಕಿಸ್ತಾನದ ಮೇಲೆ ಶೇ.19, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಮೇಲೆ ಶೇ.20, ಸಿರಿಯಾ ಶೇ.41, ಬ್ರೆಜಿಲ್ ಶೇ. 10, ಜಪಾನ್ ಶೇ.15, ಲಾವೋಸ್ ಮತ್ತು ಮ್ಯಾನ್ಮಾರ್ ತಲಾ ಶೇ.40, ಶ್ರೀಲಂಕಾ ಶೇ.20 ಮತ್ತು ಯುನೈಟೆಡ್ ಕಿಂಗ್‌ಡಮ್ ಶೇ. 10, ದಕ್ಷಿಣ ಆಫ್ರಿಕಾದ ಮೇಲೆ ಶೇ.30 ಮತ್ತು ಸ್ವಿಟ್ಜರ್ಲೆಂಡ್‌ನ ಮೇಲೆ ಶೇ.39 ರಷ್ಟು ಅತ್ಯಧಿಕ ಸುಂಕ ವಿಧಿಸಲಾಗಿದೆ.
ಅಲ್ಲದೆ, ಕ್ಯಾಮರೂನ್, ಚಾಡ್, ಇಸ್ರೇಲ್, ಟರ್ಕಿಯೆ, ವೆನೆಜುವೆಲಾ ಮತ್ತು ಲೆಸೊಥೊ ದೇಶಗಳ ಮೇಲೆ ಶೇ.15 ಸುಂಕ ವಿಧಿಸಿದೆ. ಆದರೆ, ಚೀನಾ ಜೊತೆಗಿನ ವ್ಯಾಪಾರ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ.
ಭಾರತದ ಮೇಲೆ ಶೇ.25 ತೆರಿಗೆ ವಿಧಿಸಿರುವ ಅಮೆರಿಕಾದ ಕ್ರಮದಿಂದಾಗಿ ಇದೀಗ ಎಲೆಕ್ಟ್ರಾನಿಕ್ ಉಪಕರಣಗಳು, ವಾಹನ, ಬಿಡಿಭಾಗಗಳು, ರತ್ನಗಳು, ಜವಳಿ, ಕಬ್ಬಿಣ, ಸ್ಟೀಲ್, ಕೃಷಿ ಮತ್ತು ಸಾಗರ ಉತ್ಪನ್ನ ಸೇರಿದಂತೆ ಭಾರತದ ಹಲವು ಕ್ಷೇತ್ರಗಳಿಗೆ ತೆರಿಗೆಯ ಬಿಸಿ ತಟ್ಟಲಿದೆ. ಪ್ರಸಕ್ತ ಭಾರತದ ಜವಳಿಗೆ ಅಮೆರಿಕದಲ್ಲಿ ಶೇ.8ರಷ್ಟು ತೆರಿಗೆ ಇದ್ದರೆ, ಇನ್ನು ಮುಂದೆ ಅದು ಶೇ.33ಕ್ಕೆ ಏರಲಿದೆ.