ವಾಷಿಂಗ್ಟನ್: ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸಲು ಹೋಗುವುದಿಲ್ಲ ಎಂಬ ಮಾಹಿತಿ ಕೇಳಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಇದೊಂದು ಉತ್ತಮ ಹೆಜ್ಜೆ ಎಂದು ಪ್ರಶಂಸಿಸಿದ್ದಾರೆ. ಆದರೆ, ಈ ಬಗ್ಗೆ ಖಚಿತತೆಯೂ ಇಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಸರಿ, ಭಾರತ ಇನ್ನು ಮುಂದೆ ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಅದನ್ನೇ ನಾನು ಕೇಳಿದ್ದೇನೆ. ಅದು ಸರಿಯೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ, ಆದರೆ ಇದು ಉತ್ತಮ ಹೆಜ್ಜೆಯಾಗಿದೆ. ಏನಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ ಎಂದರು.
ಶ್ವೇತಭವನ ಸುಮಾರು 70 ರಾಷ್ಟ್ರಗಳ ರಫ್ತುಗಳ ಮೇಲೆ ಯುಎಸ್ ಸುಂಕಗಳನ್ನು ಘೋಷಿಸಿದ ಒಂದು ದಿನದ ನಂತರ ಟ್ರಂಪ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಭಾರತವು ಶೇ. 25 ರಷ್ಟು ಸುಂಕ ಎದುರಿಸಬೇಕಾಗಿದೆ. ರಷ್ಯಾದ ಮಿಲಿಟರಿ ಉಪಕರಣಗಳು ಮತ್ತು ಇಂಧನವನ್ನು ಖರೀದಿಸಿದ ಕಾರಣ ಭಾರತ ಸುಂಕ ಪಾವತಿಸಬೇಕಾಗುತ್ತದೆ ಎಂದು ಈ ಟ್ರಂಪ್ ಹೇಳಿದ್ದರು. ಆದರೆ ದಂಡ ಎಂದು ಉಲ್ಲೇಖಿಸಿರಲಿಲ್ಲ.
ಭಾರತೀಯ ತೈಲ ಕಂಪನಿಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿವೆ ಎಂಬ ವರದಿಗಳ ಬಗ್ಗೆ ಶುಕ್ರವಾರ ನಡೆದ ವಾರದ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತದ ಇಂಧನ ಅಗತ್ಯಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಲಭ್ಯವಿರುವ ಬೆಲೆ ಮತ್ತು ಆ ಸಮಯದಲ್ಲಿ ಜಾಗತಿಕ ಪರಿಸ್ಥಿತಿಯನ್ನು ಅವಲಂಬಿಸಿ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಬಗ್ಗೆ ವಿವರಗಳು ನನ್ನ ಬಳಿ ಇಲ್ಲ ಎಂದು ಹೇಳಿದರು.
ಭಾರತದೊಂದಿಗೆ ಯುಎಸ್ ಭಾರಿ ವ್ಯಾಪಾರ ಕೊರತೆಯನ್ನು ಹೊಂದಿದೆ ಎಂದು ಘೋಷಿಸಿದ ಟ್ರಂಪ್, ಭಾರತ ನಮ್ಮ ಸ್ನೇಹಿತ, ನಾವು ಅವರೊಂದಿಗೆ ಒಟ್ಟಾರೇ ಕಡಿಮೆ ವ್ಯಾಪಾರವನ್ನು ಮಾಡಿದ್ದೇವೆ ಏಕೆಂದರೆ ಅವರ ಸುಂಕಗಳು ತುಂಬಾ ಹೆಚ್ಚು. ವಿಶ್ವದಲ್ಲಿಯೇ ಅತಿ ಹೆಚ್ಚಾಗಿದೆ. ಅವರು ಯಾವಾಗಲೂ ತಮ್ಮ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸುತ್ತಿದ್ದು, ಚೀನಾದ ಜೊತೆಗೆ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಾಗಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾ ಹತ್ಯೆಯನ್ನು ನಿಲ್ಲಿಸಬೇಕೆಂದು ಎಲ್ಲರೂ ಬಯಸುತ್ತಿರುವ ಸಮಯದಲ್ಲಿ ಎಲ್ಲವೂ ಉತ್ತಮವಾಗಿಲ್ಲ! ಹಾಗಾಗಿ, ಭಾರತವು ಆಗಸ್ಟ್ 1 ರಿಂದ ಶೇ. 25 ರಷ್ಟು ಸುಂಕವನ್ನು ಮತ್ತು ಮೇಲಿನ ದಂಡವನ್ನು ಪಾವತಿಸಲಿದೆ ಎಂದು ಹೇಳಿದ್ದರು.
ನಿಕಟ ಸಂಬಂಧಕ್ಕಾಗಿ ಭಾರತ ಮತ್ತು ರಷ್ಯಾ ಮೇಲೆ ತೀಕ್ಷ್ಣವಾದ ದಾಳಿಯನ್ನು ಸಹ ನಡೆಸಿದ್ದರು. ಉಭಯ ದೇಶಗಳು ತಮ್ಮ ಸತ್ತ ಆರ್ಥಿಕತೆಯನ್ನು ಒಟ್ಟಿಗೆ ಕೊಂಡೊಯ್ಯಬಹುದು" ಎಂದು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಫೋಸ್ಟ್ ಮಾಡಿದ್ದರು. ಇದಕ್ಕೆ ಭಾರತದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.