ಡೊನಾಲ್ಡ್ ಟ್ರಂಪ್  
ವಿದೇಶ

'ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ': ಭಾರತದ ತಿರುಗೇಟಿಗೆ ತಕ್ಕ ಉತ್ತರ ನೀಡದೆ ನುಣುಚಿಕೊಂಡ Donald Trump

ರಷ್ಯಾದಿಂದ ಅಮೆರಿಕ ರಾಸಾಯನಿಕ ವಸ್ತುಗಳ ಆಮದಿನ ಬಗ್ಗೆ ಭಾರತದ ಹೇಳಿಕೆಯನ್ನು ಎತ್ತಿ ತೋರಿಸುವ ಪ್ರಶ್ನೆಗೆ ಟ್ರಂಪ್ ನುಣುಚಿಕೊಳ್ಳುವ ರೀತಿಯಲ್ಲಿ ಉತ್ತರಿಸಿದ್ದಾರೆ.

ರಷ್ಯಾದೊಂದಿಗೆ ಭಾರತದ ಇಂಧನ ಸಂಬಂಧಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಟೀಕೆ ಮಾಡಿದ್ದರು. ಇದೀಗ ರಷ್ಯಾದಿಂದ ಯುರೇನಿಯಂ, ರಸಗೊಬ್ಬರ ಮತ್ತು ರಾಸಾಯನಿಕಗಳ ಅಮೆರಿಕದ ಆಮದಿನ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಈಗ ನೀವು ಹೇಳುತ್ತಿದ್ದೀರಿ, ಆ ಬಗ್ಗೆ ಪರಿಶೀಲಿಸಬೇಕು ಎಂದು ರಷ್ಯಾದಿಂದ ಅಮೆರಿಕ ರಾಸಾಯನಿಕ ವಸ್ತುಗಳ ಆಮದಿನ ಬಗ್ಗೆ ಭಾರತದ ಹೇಳಿಕೆಯನ್ನು ಎತ್ತಿ ತೋರಿಸುವ ಪ್ರಶ್ನೆಗೆ ಟ್ರಂಪ್ ನುಣುಚಿಕೊಳ್ಳುವ ರೀತಿಯಲ್ಲಿ ಉತ್ತರಿಸಿದ್ದಾರೆ.

ಅಮರಿಕ ಈಗಲೂ ಯುರೇನಿಯಂ ಮತ್ತು ರಸಗೊಬ್ಬರವನ್ನು ರಷ್ಯಾದಿಂದ ಖರೀದಿಸುತ್ತಿದೆ ಎಂಬ ಭಾರತದ ಮಾಡಿದ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ಯುರೇನಿಯಂ ಮತ್ತು ರಸಗೊಬ್ಬರ ವ್ಯಾಪಾರದ ಬಗ್ಗೆ ನನಗೆ ತಿಳಿದಿಲ್ಲ. ನಾನು ಅದನ್ನು ಪರಿಶೀಲಿಸಬೇಕು ಎಂದಷ್ಟೇ ಹೇಳಿದ್ದಾರೆ.

ರಷ್ಯಾ ಉಕ್ರೇನ್‌ (Ukraine) ಮೇಲೆ ದಾಳಿ ನಡೆಸಿದ ಬಳಿಕವೂ ಅಮೆರಿಕ ಶತಕೋಟಿ ಡಾಲರ್‌ ಮೌಲ್ಯದ ಇಂಧನ ಮತ್ತು ಎನ್‌ರಿಚ್‌ ಆಗಿರುವ ಯುರೇನಿಯಂ ಸೇರಿದಂತೆ ಹಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ರಷ್ಯಾದ ದಾಳಿಗೂ ಮೊದಲು ಭಾರೀ ಪ್ರಮಾಣದಲ್ಲಿ ಅಮೆರಿಕ ರಷ್ಯದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ಪ್ರಮಾಣ ಕಡಿಮೆಯಾಗಿದ್ದರೂ ಆಮದು ಮುಂದುವರಿಯುತ್ತಿದೆ.

ಕಳೆದ ವಾರ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ ನಂತರ, ಭಾರತವು ರಷ್ಯಾದ ತೈಲವನ್ನು ನಿರಂತರವಾಗಿ ಖರೀದಿಸುತ್ತಿರುವುದಕ್ಕೆ ಅನಿರ್ದಿಷ್ಟ ದಂಡ ವಿಧಿಸಿದ ನಂತರ ಭಾರತ-ಅಮೆರಿಕ ನಡುವಿನ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಾಗಿದೆ ಎನ್ನಬಹುದು.

ಎರಡೂ ದೇಶಗಳ ಮಧ್ಯೆ ಸುಂಕ ಸಮರವು ಎದ್ದಿದ್ದರೂ, ಪಾಕಿಸ್ತಾನ ವಿರುದ್ಧ ಭಾರತದ ಆರಪೇಷನ್ ಸಿಂದೂರ್ ನಂತರ ಭಾರತ- ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಟ್ರಂಪ್ ಪದೇ ಪದೇ ಹೇಳಿಕೊಂಡು ಬಂದಿದ್ದು ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಹತ್ತಿರವಾದಂತೆ ಕಾಣುತ್ತಿದ್ದಾರೆ.

ಭಾರತ ನಮಗೆ ಉತ್ತಮ ವ್ಯಾಪಾರ ಪಾಲುದಾರ ರಾಷ್ಟ್ರವಾಗಿಲ್ಲ ಎಂದಿರುವ ಡೊನಾಲ್ಡ್ ಟ್ರಂಪ್, ಮುಂದಿನ 24 ಗಂಟೆಗಳಲ್ಲಿ ಭಾರತದ ಮೇಲೆ ಮತ್ತಷ್ಟು ಸುಂಕವನ್ನು ಹೆಚ್ಚಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ರಷ್ಯಾದಿಂದ ತೈಲವನ್ನು ನಿರಂತರವಾಗಿ ಭಾರತ ಖರೀದಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಭಾರತ ಉತ್ತಮ ವ್ಯಾಪಾರ ಪಾಲುದಾರನಲ್ಲ, ಅವರು ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ, ಆದರೆ ನಾವು ಅವರೊಂದಿಗೆ ವ್ಯಾಪಾರ ಮಾಡುವುದಿಲ್ಲ. ಈಗಾಗಲೇ ಶೇ 25ರಷ್ಟು ಆಮದು ಸುಂಕ ವಿಧಿಸಿರುವುದನ್ನು ಮುಂದಿನ 24 ಗಂಟೆಗಳಲ್ಲಿ ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಅವರು ರಷ್ಯಾದ ತೈಲವನ್ನು ಖರೀದಿಸುತ್ತಿದ್ದಾರೆ. ಎಂದು ಡೊನಾಲ್ಡ್ ಟ್ರಂಪ್ ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಭಾರತ ಹೇಳಿದ್ದೇನು

ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿ ಉಕ್ರೇನ್‌ ಯುದ್ಧಕ್ಕೆ ಸಹಕಾರ ನೀಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರಿದ್ದಕ್ಕೆ ಭಾರತ ಅಂಕಿಸಂಖ್ಯೆಯನ್ನು ನೀಡುವ ಮೂಲಕ ಖಡಕ್‌ ತಿರುಗೇಟು ನೀಡಿತ್ತು.

ಅಮೆರಿಕ ಅಧ್ಯಕ್ಷರ ಟೀಕೆಗಳನ್ನು ದೃಢವಾಗಿ ತಿರಸ್ಕರಿಸಿದ ಭಾರತ, ಈ ವಿಷಯದಲ್ಲಿ ಭಾರತವನ್ನು ಗುರಿಯಾಗಿಸಿಕೊಂಡಿರುವ ದ್ವಂದ್ವ ಮಾನದಂಡಗಳನ್ನು ಎತ್ತಿ ತೋರಿಸಿತು. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಎರಡೂ ರಷ್ಯಾದೊಂದಿಗೆ ತಮ್ಮ ವ್ಯಾಪಾರ ಸಂಬಂಧವನ್ನು ಮುಂದುವರಿಸುತ್ತಿವೆ ಎಂದು ಹೇಳಿದೆ. ಇಂತಹ ವ್ಯಾಪಾರವು ಒಂದು ಪ್ರಮುಖ ರಾಷ್ಟ್ರೀಯ ಬಲವಂತವೂ ಅಲ್ಲ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿತ್ತು.

ಐರೋಪ್ಯ ಒಕ್ಕೂಟ-ರಷ್ಯಾ ವ್ಯಾಪಾರವು ಕೇವಲ ಇಂಧನವನ್ನು ಮಾತ್ರವಲ್ಲದೆ, ರಸಗೊಬ್ಬರಗಳು, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ, ಉಕ್ಕು, ಯಂತ್ರೋಪಕರಣಗಳು ಮತ್ತು ಸಾರಿಗೆ ಉಪಕರಣಗಳನ್ನು ಸಹ ಒಳಗೊಂಡಿದೆ ಎಂದು MEA ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಲ್.ಕೆ. ಅಡ್ವಾಣಿ ಹೊಗಳಿದ ಶಶಿ ತರೂರ್; ಅಂತರ ಕಾಯ್ದುಕೊಂಡ ಕಾಂಗ್ರೆಸ್

Ironman Challenge: ಅಣ್ಣಾಮಲೈ ಭಾಗಿ, ಸತತ 2ನೇ ಬಾರಿಗೆ ಸಂಸದ ಸೂರ್ಯ ಐರನ್‌ಮ್ಯಾನ್ ಸಾಧನೆ!

RSS ದೇಣಿಗೆ ಕುರಿತು ಮೋಹನ್ ಭಾಗವತ್ ಗೆ 11 ಪ್ರಶ್ನೆ ಕೇಳಿದ ಸಚಿವ ಪ್ರಿಯಾಂಕ್ ಖರ್ಗೆ

Serious Action Soon': ಸೆಂಟ್ರಲ್ ಜೈಲಲ್ಲಿ ಐಸಿಸ್‌ ಉಗ್ರ, ವಿಕೃತ ಕಾಮಿ ಉಮೇಶ್‌ ರೆಡ್ಡಿಗೆ 'ರಾಜಾತಿಥ್ಯ'ಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ!

Assembly polls 2025: ಯಾರಿಗೆ ಬಿಹಾರ, ಮತ್ತೆ ಮಹಿಳಾ ಮತದಾರರು ನಿರ್ಧರಿಸಲಿದ್ದಾರೆಯೇ?

SCROLL FOR NEXT