ವಾಷಿಂಗ್ಟನ್: ಅಮೆರಿಕ ಪ್ರತಿದಿನವೂ ಭಾರತ ಮತ್ತು ಪಾಕಿಸ್ತಾನದ ಮೇಲೆ ಕಣ್ಣಿಟ್ಟಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭಾನುವಾರ ಹೇಳಿದ್ದಾರೆ. ಈ ಮೂಲಕ ಏಷ್ಯಾದ ನೆರೆಹೊರೆಯ ಎರಡು ರಾಷ್ಟ್ರಗಳ ನಡುವಿನ ಪರಮಾಣು ಯುದ್ದ ತಪ್ಪಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆರವು ನೀಡಿದ್ದಾರೆ ಎಂಬ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಎನ್‌ಬಿಸಿ ನ್ಯೂಸ್‌ನೊಂದಿಗೆ ಮಾತನಾಡಿದ ರೂಬಿಯೂ, ಕದನ ವಿರಾಮ ಒಪ್ಪಂದ ಯಾವಾಗ ಬೇಕಾದರೂ ರದ್ದಾಗಬಹುದು. ಏಕೆಂದರೆ ಅವುಗಳನ್ನು ನಿರ್ವಹಿಸುವುದು ಒಂದು ಸವಾಲಾಗಿದೆ ಎಂದಿದ್ದಾರೆ.
ಭಾರಿ ಹಾನಿಯಾದ ನಂತರ ಪಾಕಿಸ್ತಾನದ ಕೋರಿಕೆಯಂತೆ ಕದನ ವಿರಾಮ ಒಪ್ಪಂದದ ಮೂಲಕ ಮಿಲಿಟರಿ ಸಂಘರ್ಷವು ಮೇ ತಿಂಗಳಲ್ಲಿ ಕೊನೆಗೊಂಡಿತು ಎಂದು ಭಾರತ ಸಮರ್ಥಿಸಿಕೊಂಡಿದೆ. ಆದಾಗ್ಯೂ, ಪಾಕಿಸ್ತಾನ ಟ್ರಂಪ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ, ಕದನ ವಿರಾಮ ಒಪ್ಪಂದ ಜಾರಿಯಲ್ಲಿ ಟ್ರಂಪ್ ಗೆ ಕ್ರೆಡಿಟ್ ನೀಡಿದೆ.
ಕದನ ವಿರಾಮ ಒಪ್ಪಂದ ನಿರ್ವಹಿಸುವುದು ಅಂದುಕೊಂಡಷ್ಟು ಸುಲಭವಲ್ಲಾ. ಯಾವಾಗಬೇಕಾದರೂ ನಿಯಮಗಳು ಉಲ್ಲಂಘನೆಯಾಗಬಹುದು. ಪಾಕಿಸ್ತಾನ ಮತ್ತು ಭಾರತದ ನಡುವೆ ಏನಾಗುತ್ತಿದೆ ಎಂಬುದರ ಮೇಲೆ ಪ್ರತಿದಿನ ನಾವು ಕಣ್ಣಿಟ್ಟಿದ್ದೇವೆ ಎಂದು ರೂಬಿಯೊ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಕದನ ವಿರಾಮ ಒಪ್ಪಂದ ಕುರಿತು ಮಾತನಾಡಿದ ಅವರು, ಎರಡು ರಾಷ್ಟ್ರದವರು ಪರಸ್ಪರ ಗುಂಡು ಹಾರಿಸುವುದನ್ನು ನಿಲ್ಲಿಸಲು ಕದನ ವಿರಾಮವೇ ಏಕೈಕ ಮಾರ್ಗವಾಗಿದೆ. ಆದರೆ ರಷ್ಯನ್ನರು ಅದನ್ನು ಒಪ್ಪಲಿಲ್ಲ ಎಂದು ತಿಳಿಸಿದರು. '
'ಫಾಕ್ಸ್ ಬ್ಯುಸಿನೆಸ್' ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಸಂಘರ್ಷವನ್ನು ತಾವೇ ಬಗೆಹರಿಸಿದ್ದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದೇ ಪದೇ ಹೇಳಿಕೆಯನ್ನು ಪುನರುಚ್ಚರಿಸಿದ ರೂಬಿಯೊ, ಶಾಂತಯುತ ಆಡಳಿತಕ್ಕೆ ಆದ್ಯತೆ ನೀಡಿರುವ ರಾಷ್ಟ್ರ ಅಧ್ಯಕ್ಷರನ್ನು ನಾವು ಪಡೆದಿರುವುದು ನಮ್ಮ ಅದೃಷ್ಟ. ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಲ್ಲಿ ನೋಡಿದ್ದೇವೆ. ಭಾರತ-ಪಾಕಿಸ್ತಾನದಲ್ಲಿ ನೋಡಿದ್ದೇವೆ. ರುವಾಂಡಾ ಮತ್ತು ಡಿಆರ್‌ಸಿಯಲ್ಲಿ ನೋಡಿದ್ದೇವೆ. ನಾವು ಜಗತ್ತಿನಲ್ಲಿ ಶಾಂತಿಯನ್ನು ತರಲು ಪ್ರಯತ್ನಿಸುತ್ತೇವೆ" ಎಂದು ಹೇಳಿದ್ದಾರೆ.