ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ನೀಡಲಾಗಿದ್ದ ಸೀಕ್ರೆಟ್ ಸರ್ವೀಸ್ ರಕ್ಷಣೆಯನ್ನು ರದ್ದುಗೊಳಿಸಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಶುಕ್ರವಾರ ಅಮೆರಿಕದ ಹಲವಾರು ಮಾಧ್ಯಮಗಳು ವರದಿ ಮಾಡಿವೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಕಮಲಾ ಹ್ಯಾರಿಸ್ ಅವರ ಸೀಕ್ರೆಟ್ ಸರ್ವೀಸ್ ರಕ್ಷಣೆಯನ್ನು ರದ್ದುಗೊಳಿಸಿದ್ದಾರೆ ಎಂದು ಸಿಎನ್‌ಎನ್ ಪರಿಶೀಲಿಸಿದ ಪತ್ರದ ಪ್ರತಿ ತಿಳಿಸಿದೆ.
ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರು, ಕಮಲಾ ಹ್ಯಾರಿಸ್ ಅವರು ಅಧಿಕಾರದಿಂದ ನಿರ್ಗಮಿಸುವ ಮೊದಲು ಅವರಿಗೆ ರಕ್ಷಣೆ ಒದಗಿಸಲು ಸೀಕ್ರೆಟ್ ಸರ್ವೀಸ್‌ಗೆ ವ್ಯವಸ್ಥೆ ಮಾಡಿದ್ದರು.
ಮಾಜಿ ಉಪಾಧ್ಯಕ್ಷರಾಗಿ, ಹ್ಯಾರಿಸ್ ಅವರು ಜನವರಿಯಲ್ಲಿ ಅಧಿಕಾರದಿಂದ ನಿರ್ಗಮಿಸಿದ ನಂತರ ಹೆಚ್ಚುವರಿಯಾಗಿ ಈ ಭದ್ರತೆಯನ್ನು ಆರು ತಿಂಗಳು ಪಡೆಯಲು ಕಾನೂನಿನಡಿಯಲ್ಲಿ ಅರ್ಹರಾಗಿದ್ದರು. ಇದು ಜುಲೈನಲ್ಲಿ ಮುಕ್ತಾಯಗೊಳ್ಳಬೇಕಿತ್ತು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
2008 ರಲ್ಲಿ ಯುಎಸ್ ಕಾಂಗ್ರೆಸ್ ಅಂಗೀಕರಿಸಿದ ಕಾನೂನು ಪ್ರಕಾರ, ಮಾಜಿ ಉಪಾಧ್ಯಕ್ಷರು, ಅವರ ಸಂಗಾತಿ ಮತ್ತು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವರ ಮಕ್ಕಳನ್ನು ಉಪಾಧ್ಯಕ್ಷರ ಅವಧಿ ಮುಗಿದ ನಂತರ ಆರು ತಿಂಗಳವರೆಗೆ ರಕ್ಷಿಸಲು ಸೀಕ್ರೆಟ್ ಸರ್ವೀಸ್‌ಗೆ ಅಧಿಕಾರ ನೀಡಿದೆ.