ಉಕ್ರೇನ್ -ರಷ್ಯಾ ಯುದ್ಧಕ್ಕೆ ಭಾರತವೇ ಕಾರಣ, ಯುದ್ಧವನ್ನು "ಮೋದಿ ಯುದ್ಧ" ಎಂದು ಕರೆದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರು ಭಾರತದ ವಿರುದ್ಧ ಹೊಸ ಟೀಕೆ ಮಾಡಿದ್ದಾರೆ.
ಭಾರತ ರಷ್ಯಾಕ್ಕೆ ಆರ್ಥಿಕವಾಗಿ ಸಹಾಯ ಮಾಡುತ್ತಿದೆ, ರಷ್ಯಾ ಅಧ್ಯಕ್ಷ ಪುಟಿನ್ ಅವರ ಯುದ್ಧ ಪ್ರಯತ್ನಕ್ಕೆ ಹಣಕಾಸು ಒದಗಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್ ಮಾಡಿದ್ದು, ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿ, ಅದನ್ನು ಸಂಸ್ಕರಿಸಿ, ಜಾಗತಿಕವಾಗಿ ಇಂಧನಗಳನ್ನು ರಫ್ತು ಮಾಡುತ್ತಿದೆ. ಇದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡಲು ಸಹಾಯವಾಗುತ್ತಿದೆ ಎಂದಿದ್ದಾರೆ.
ಭಾರತ ತೈಲ ಖರೀದಿಸುತ್ತಿರುವುದರಿಂದ ರಷ್ಯಾ ಭಾರತವನ್ನು ಹಣದ ಲ್ಯಾಂಡ್ರಿಯಾಗಿ ಮಾಡಿಕೊಂಡಿದೆ ಎಂದು ಅವರು ಬರೆದಿದ್ದಾರೆ, ಭಾರತೀಯ ಸಂಸ್ಕರಣಾಗಾರರು ರಷ್ಯಾದ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ದಿನಕ್ಕೆ 1 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ರಫ್ತು ಮಾಡುತ್ತಿದ್ದಾರೆ, ಭಾರತ ರಷ್ಯಾದ ಕಚ್ಚಾ ತೈಲದ ಅರ್ಧಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕ ದೇಶಕ್ಕೆ ರಫ್ತಿನ ಮೇಲೆ ಹೆಚ್ಚಿನ ಸುಂಕಗಳನ್ನು ಕಾಯ್ದುಕೊಳ್ಳುವುದರ ಜೊತೆಗೆ ಸೂಕ್ಷ್ಮ ಮಿಲಿಟರಿ ತಂತ್ರಜ್ಞಾನ ವರ್ಗಾವಣೆ ಮತ್ತು ಅಮೇರಿಕನ್ ಸಂಸ್ಥೆಗಳೊಂದಿಗೆ ರಕ್ಷಣಾ ಉತ್ಪಾದನಾ ಒಪ್ಪಂದಗಳನ್ನು ಕೋರಿದ್ದಕ್ಕಾಗಿ ನವರೊ ಭಾರತವನ್ನು ಟೀಕಿಸಿ ಅದು ಭಾರತದ ಕುತಂತ್ರ, ಭಾರತವನ್ನು ಕಾರ್ಯತಂತ್ರದ ಪಾಲುದಾರನಂತೆ ಪರಿಗಣಿಸಬೇಕೆಂದರೆ, ಅದರಂತೆ ವರ್ತಿಸಬೇಕು ಎಂದು ಕಿಡಿಕಾರಿದ್ದಾರೆ.
ಅಮೆರಿಕದ ಟ್ರಂಪ್ ಆಡಳಿತವು ಭಾರತೀಯ ಸರಕುಗಳ ಮೇಲೆ ಶೇ. 50 ರಷ್ಟು ಸುಂಕಗಳನ್ನು ವಿಧಿಸಿ ಕಠಿಣ ವ್ಯಾಪಾರ ಸಮರಕ್ಕೆ ನಾಂದಿಹಾಡಿದೆ.
ವಿವಾದಕ್ಕೆ ಕಾರಣವಾಗುವಂತೆ, ನವರೊ ತಮ್ಮ ಪೋಸ್ಟ್‌ಗಳೊಂದಿಗೆ "ಭಾರತ-ರಷ್ಯಾ ಬ್ಲಡ್ ಆಯಿಲ್ ಟ್ರೇಡ್" ಎಂಬ ಶೀರ್ಷಿಕೆಯಡಿ ಪ್ರಧಾನಿ ಮೋದಿ ಕೇಸರಿ ಬಟ್ಟೆ ಧರಿಸಿ ಧ್ಯಾನಸ್ಥ ಭಂಗಿಯಲ್ಲಿರುವ ಚಿತ್ರಗಳನ್ನು ಪೋಸ್ಟ್ ಮಾಡಿ ಉಕ್ರೇನ್ ನಲ್ಲಿ ಶಾಂತಿ ಸ್ಥಾಪನೆಯ ಮಾರ್ಗ ಭಾರತದ ಮೂಲಕವಾಗಿದೆ ಎಂದು ಬರೆದುಕೊಂಡಿದ್ದಾರೆ.