ಬ್ಯಾಂಕಾಕ್: ಪ್ರಮುಖ ಬಂಡುಕೋರ ಸಶಸ್ತ್ರ ಪಡೆ ನಿಯಂತ್ರಿಸುವ ಪ್ರದೇಶದಲ್ಲಿನ ಆಸ್ಪತ್ರೆ ಮೇಲೆ ಮ್ಯಾನ್ಮಾರ್ ಸೇನೆಯು ನಡೆಸಿದ ವಾಯುದಾಳಿಯಲ್ಲಿ 34 ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ರಾಜ್ಯವಾದ ರಾಖೈನ್‌ನಲ್ಲಿರುವ ಜನಾಂಗೀಯ ಅರಕನ್ ಸೈನ್ಯದ ನಿಯಂತ್ರಣದಲ್ಲಿರುವ ಪ್ರದೇಶವಾದ ಮ್ರೌಕ್-ಯು ಪಟ್ಟಣದಲ್ಲಿರುವ ಜನರಲ್ ಆಸ್ಪತ್ರೆಯ ಮೇಲೆ ಬುಧವಾರ ರಾತ್ರಿ ನಡೆದ ದಾಳಿಯಲ್ಲಿ ಸುಮಾರು 80 ಜನರು ಗಾಯಗೊಂಡಿದ್ದಾರೆ.
ರಾಖೈನ್‌ನಲ್ಲಿನ ರಕ್ಷಣಾ ಸೇವೆಗಳ ಹಿರಿಯ ಅಧಿಕಾರಿ ವಾಯ್ ಹುನ್ ಆಂಗ್, ಜೆಟ್ ಫೈಟರ್ ರಾತ್ರಿ 9:13ಕ್ಕೆ ಎರಡು ಬಾಂಬ್‌ಗಳನ್ನು ಹಾಕಿದೆ. ಒಂದು ಆಸ್ಪತ್ರೆಯ ವಾರ್ಡ್‌ಗೆ ಬಡಿದು ಇನ್ನೊಂದು ಆಸ್ಪತ್ರೆಯ ಮುಖ್ಯ ಕಟ್ಟಡದ ಬಳಿ ಬಿತ್ತು. ವಾಯುದಾಳಿಯಿಂದ ಆಸ್ಪತ್ರೆ ಕಟ್ಟಡದ ಬಹುಪಾಲು ನಾಶವಾಗಿದೆ. ಆಸ್ಪತ್ರೆಯ ಬಳಿಯಿದ್ದ ಟ್ಯಾಕ್ಸಿಗಳು ಮತ್ತು ಬೈಕ್ ಗಳು ಸಹ ಹಾನಿಗೊಳಗಾಗಿವೆ.
ಈ ಹಿಂದೆ ಅರಾಕನ್ ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳವು 2017ರಲ್ಲಿ ಕ್ರೂರ ಸೇನಾ ದಂಗೆ ನಿಗ್ರಹ ಕಾರ್ಯಾಚರಣೆಯ ಸ್ಥಳವಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸುಮಾರು 740,000 ಅಲ್ಪಸಂಖ್ಯಾತ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶದ ಗಡಿಯುದ್ದಕ್ಕೂ ಸುರಕ್ಷತೆ ಪಡೆಯಲು ತೆರಳಿದರು. ಬೌದ್ಧ ರಾಖೈನ್ ಮತ್ತು ರೋಹಿಂಗ್ಯಾಗಳ ನಡುವೆ ಇನ್ನೂ ಜನಾಂಗೀಯ ಉದ್ವಿಗ್ನತೆ ಇದೆ.