ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಮೊಜಾಂಬಿಕ್ ಅಧ್ಯಕ್ಷ ಡೇನಿಯಲ್ ಚಾಪೋ ಅವರನ್ನು ಭೇಟಿ ಮಾಡಿ ಅಚ್ಚರಿಗೊಂಡರು.
ಹೌದು.. ನಿತ್ಯ ಹತ್ತಾರು ವಿದೇಶಿ ನಾಯಕರನ್ನು ಭೇಟಿಯಾಗುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮೊಜಾಂಬಿಕ್ ಅಧ್ಯಕ್ಷ ಡೇನಿಯಲ್ ಚಾಪೋ ಅವರನ್ನು ಕಂಡು ದಂಗಾಗಿದ್ದಾರೆ. ದ್ವಿಪಕ್ಷೀಯ ಮಾತುಕತೆ ಸಂಬಂಧ ರೋಮ್ ಗೆ ಆಗಮಿಸಿದ್ದ ಡೇನಿಯಲ್ ಚಾಪೋ ಅವರನ್ನು ಜಾರ್ಜಿಯಾ ಮೆಲೋನಿ ಔಪಚಾರಕವಾಗಿ ಸ್ವಾಗತಿಸಿದರು. ಈ ವೇಳೆ ಅವರ ಎತ್ತರ ಕಂಡು ಜಾರ್ಜಿಯಾ ಮೆಲೋನಿ ದಂಗಾದರು.
ಇಟಾಲಿಯನ್ ಸರ್ಕಾರಿ ಪ್ರಧಾನ ಕಚೇರಿಯಲ್ಲಿ ನಡೆದ ಭೇಟಿಯ ಸಮಯದಲ್ಲಿ, ಇಬ್ಬರು ನಾಯಕರ ನಡುವಿನ ಎತ್ತರ ವ್ಯತ್ಯಾಸವು ಸ್ಪಷ್ಟವಾಗಿ ಗೋಚರಿಸಿತು. 5.2 ಅಡಿ ಎತ್ತರದ ಜಾರ್ಜಿಯಾ ಮೆಲೋನಿ 6.8 ಅಡಿ ಎತ್ತರದ ಡೇನಿಯಲ್ ಚಾಪೋ ಅವರನ್ನು ತಲೆ ಎತ್ತಿ ನೋಡುತ್ತಲೇ ಹಸ್ತಲಾಘವ ಮಾಡಿದರು. ಈ ಕುರಿತ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮೊಜಾಂಬಿಕ್ ಅಧ್ಯಕ್ಷರ ಎತ್ತರ ನೋಡಿದ ಮೆಲೋನಿ ಮುಖದಲ್ಲಿ ಅಚ್ಚರಿ ಮತ್ತು ಮಂದಹಾಸ ಮೂಡಿತ್ತು. ಕೆಲವು ಸೆಕೆಂಡುಗಳ ಕಾಲ, ವ್ಯತ್ಯಾಸವನ್ನು ಗಮನಿಸಿದ ನಂತರ ಅವರು ಏನೋ ಹೇಳಿದಂತೆ ತೋರುತ್ತಿತ್ತು. ಈ ವೇಳೆ ಛಾಯಾಗ್ರಾಹಕರಿಗೂ ಅವರಿಬ್ಬರನ್ನೂ ಒಂದೇ ಚೌಕಟ್ಟಿನಲ್ಲಿ ತರಲು ಸ್ವಲ್ಪ ಸಮಯ ಹಿಡಿಯಿತು.
ಉಭಯ ನಾಯಕರ ಎತ್ತರದ ಬಗ್ಗೆ ಹೇಳುವುದಾದರೆ, ಅಧ್ಯಕ್ಷ ಡೇನಿಯಲ್ ಚಾಪೋ ಸುಮಾರು 6.8 ಅಡಿ ಎತ್ತರವಿದ್ದರೆ, ಪ್ರಧಾನಿ ಜಾರ್ಜಿಯಾ ಮೆಲೋನಿ ಸುಮಾರು 5.2 ಅಡಿ ಎತ್ತರವಿದ್ದಾರೆ ಎಂದು ವರದಿಯಾಗಿದೆ. ಈ ವ್ಯತ್ಯಾಸವು ಎಷ್ಟು ಸ್ಪಷ್ಟವಾಗಿತ್ತೆಂದರೆ ಅದು ಛಾಯಾಚಿತ್ರಗಳಲ್ಲಿ ಇನ್ನಷ್ಟು ಸ್ಪಷ್ಟವಾಗಿ ಕಂಡುಬಂದಿದೆ. ಚಾಪೆೋ ಒಬ್ಬ ಪ್ರಸಿದ್ಧ ಬ್ಯಾಸ್ಕೆಟ್‍ಬಾಲ್ ಅಭಿಮಾನಿಯಾಗಿದ್ದು, ಅವರ ಎತ್ತರವನ್ನು ಈ ಹಿಂದೆ ಹಲವಾರು ಇತರ ಜಾಗತಿಕ ನಾಯಕರ ಜೊತೆಗೆ ಚರ್ಚಿಸಲಾಗಿದೆ.