ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಮೇಲೆ ಗುಂಪು ಹಿಂಸಾಚಾರ ನಡೆದಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗತೊಡಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ, ಘಟನೆಯನ್ನು ಖಂಡಿಸಿದ್ದು, ಗುಂಪು ಹಿಂಸಾಚಾರದ ಕೃತ್ಯಗಳನ್ನು ವಿರೋಧಿಸುವಂತೆ ಜನರನ್ನು ಒತ್ತಾಯಿಸಿದೆ.
ಎಲ್ಲಾ ರೀತಿಯ ಹಿಂಸೆ, ಬೆದರಿಕೆ, ಬೆಂಕಿ ಹಚ್ಚುವಿಕೆ ಮತ್ತು ಆಸ್ತಿ ನಾಶವನ್ನು 'ಬಲವಾಗಿ ಮತ್ತು ನಿಸ್ಸಂದಿಗ್ಧವಾಗಿ' ಖಂಡಿಸುವುದಾಗಿ ಯೂನಸ್ ಸರ್ಕಾರ ಹೇಳಿದೆ. ಅಂತಹ ಕ್ರಮಗಳು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಹಳಿತಪ್ಪಿಸುವ ಬೆದರಿಕೆಯನ್ನುಂಟುಮಾಡುತ್ತವೆ ಎಂದು ಎಚ್ಚರಿಸಿದೆ.
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳ ನಡುವೆ, ಇಸ್ಲಾಂ ಧರ್ಮವನ್ನು ಅವಮಾನಿಸಿದ ಆರೋಪದ ಮೇಲೆ ಮೈಮೆನ್ಸಿಂಗ್ ಜಿಲ್ಲೆಯ ಭಾಲುಕಾ ಉಪಜಿಲ್ಲಾದಲ್ಲಿ ನಡೆದ ಗುಂಪು ಹಲ್ಲೆಯಲ್ಲಿ ಯುವಕ ಹಿಂದೂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಪ್ರತಿಭಟನಾಕಾರರು 30 ವರ್ಷದ ದೀಪು ಚಂದ್ರ ದಾಸ್ ಅವರ ಮೃತದೇಹವನ್ನು ಸುಟ್ಟುಹಾಕಿದರು ಎಂದು ಬಾಂಗ್ಲಾದೇಶದ ಮಾಧ್ಯಮ ವರದಿಗಳು ತಿಳಿಸಿವೆ.
ಜುಲೈ ದಂಗೆಯ ಪ್ರಮುಖ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಮರಣದ ನಂತರ ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಾಗ ಈ ಘಟನೆ ಸಂಭವಿಸಿದೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಹಿಂದೂ ವ್ಯಕ್ತಿಯ ಹತ್ಯೆಯನ್ನು ಬಲವಾಗಿ ಖಂಡಿಸಿದೆ.