ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ 
ವಿದೇಶ

ಗುಂಡೇಟಿಗೆ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಸಾವು: ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಅವಾಮಿ ಲೀಗ್ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ

ಪ್ರತಿಭಟನೆ ವೇಳೆ ಅವಾಮಿ ಲೀಗ್ ಪಕ್ಷದ ಕಚೇರಿ, ದೇಶದ ಎರಡು ಪ್ರಮುಖ ಪತ್ರಿಕೆಗಳಾದ ಡೈಲಿ ಸ್ಟಾರ್ ಮತ್ತು ಪ್ರಥಮ್ ಆಲೋ ಕಚೇರಿಗಳಿಗೆ ಬೆಂಕಿ ಹೆಚ್ಚಿದ್ದು, ಕಚೇರಿಗೊಳಗೆ ಸಿಬ್ಬಂದಿಗಳು ಸಿಲುಕಿಕೊಂಡಿದ್ದಾರೆಂದು ತಿಳಿದುಬಂದಿದೆ.

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ.

ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾನೆ. ಈ ಸುದ್ದಿ ಹರಡುತ್ತಿದ್ದಂತೆ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ.

ಸಾವಿರಾರು ಪ್ರತಿಭಟನಾಕಾರರು ಬಾಂಗ್ಲಾದೇಶದ ರಾಜಧಾನಿ ಢಾಕಾದ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಹಂತಕರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ವೇಳೆ ಅವಾಮಿ ಲೀಗ್ ಪಕ್ಷದ ಕಚೇರಿ, ದೇಶದ ಎರಡು ಪ್ರಮುಖ ಪತ್ರಿಕೆಗಳಾದ ಡೈಲಿ ಸ್ಟಾರ್ ಮತ್ತು ಪ್ರಥಮ್ ಆಲೋ ಕಚೇರಿಗಳಿಗೆ ಬೆಂಕಿ ಹೆಚ್ಚಿದ್ದು, ಕಚೇರಿಗೊಳಗೆ ಸಿಬ್ಬಂದಿಗಳು ಸಿಲುಕಿಕೊಂಡಿದ್ದಾರೆಂದು ತಿಳಿದುಬಂದಿದೆ.

ಷರೀಫ್ ಉಸ್ಮಾನ್ ಹಾದಿ ಅವರು ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವಿದ್ಯಾರ್ಥಿ ಹೋರಾಟಕ್ಕೆ ನಾಯಕತ್ವ ನೀಡಿದ್ದ ಅವರು, ತಮ್ಮ ಅನೇಕ ಭಾಷಣಗಳಲಿ ಭಾರತವನ್ನು ಕುಟುವಾಗಿ ಟೀಕಿಸುತ್ತಿದ್ದರು. ಫೆಬ್ರವರಿ 2026ರಲ್ಲಿ ನಡೆಯಲಿರುವ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಹಾದಿ ಅವರು ಅಭ್ಯರ್ಥಿಯಾಗಿ ಸ್ಪರ್ಧೆ ಕೂಡ ಮಾಡಿದ್ದರು.

ಆದರೆ, ಕಳೆದ ವಾರದ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಬರುತ್ತಿದ್ದಾಗ, ಷರೀಫ್ ಉಸ್ಮಾನ್ ಹಾದಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಹಾದಿ ಅವರನ್ನು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. ಆದರೆ. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಕೊನೆಯುಸಿರೆಳೆದಿದ್ದಾರೆ. ಹಾದಿ ಅವರ ಸಾವು ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದೆ.

ಉಸ್ಮಾನ್ ಹಾದಿಯ ಸಾವಿನ ಸುದ್ದಿ ಹರಡುತ್ತಿದ್ದಂತೆ ಢಾಕಾದಲ್ಲಿ ಕನಿಷ್ಠ ಮೂರು ಕಟ್ಟಡಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಘಟನೆ ಬೆನ್ನಲ್ಲೇ ಅಗ್ನಿಶಾಮಕ ಹಾಗೂ ನಾಗರಿಕ ರಕ್ಷಣಾ ಇಲಾಖೆಯ ವಕ್ತಾರರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಡೈಲಿ ಸ್ಟಾರ್ ಕಟ್ಟಡದಲ್ಲಿ ಉಂಟಾದ ಬೆಂಕಿಯನ್ನು ಶುಕ್ರವಾರ ಬೆಳಗಿನ 1.40ರ ವೇಳೆಗೆ ನಿಯಂತ್ರಣಕ್ಕೆ ತರಲಾಗಿದೆ. ಆದರೂ 27 ಸಿಬ್ಬಂದಿ ಕಟ್ಟಡದ ಒಳಗೇ ಸಿಲುಕಿದ್ದಾರೆಂದು ವರದಿಗಳು ತಿಳಿಸಿವೆ.

ಡೈಲಿ ಸ್ಟಾರ್ ಪತ್ರಿಕೆಯ ವರದಿಗಾರ್ತಿ ಝೈಮಾ ಇಸ್ಲಾಂ, “ನಾನು ಉಸಿರಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ತುಂಬಾ ಹೊಗೆ ಇದೆ. ನಾನು ಒಳಗಿದ್ದೇನೆ ಎಂದು ಫೇಸ್‌ಬುಕ್‌ನಲ್ಲಿ ಬರೆಯುವ ಮೂಲಕ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.

ಪ್ರತಿಭಟನಾಕಾರರು ಪತ್ರಿಕೆಗಳು ಭಾರತ ಪರವಾಗಿವೆ ಎಂದು ಆರೋಪಿಸಿದ್ದು, ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿರುವುದನ್ನು ಉಲ್ಲೇಖಿಸಿದ್ದಾರೆ.

ಇದೇ ವೇಳೆ, ಬಾಂಗ್ಲಾದೇಶದಲ್ಲಿನ ಭಾರತದ ರಾಯಭಾರಿ ಕಚೇರಿಯನ್ನು ನುಗ್ಗಲು ನೂರಾರು ಪ್ರತಿಭಟನಾಕಾರರು ಯತ್ನಿಸಿದ್ದು, ಪೊಲೀಸರು ಅಶ್ರುವಾಯ ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ನಡುವೆ ಢಾಕಾದಿಂದ ಹೊರ ಹೋಗುವ ಪ್ರಮುಖ ಹೆದ್ದಾರಿಯನ್ನೂ ಪ್ರತಿಭಟನಾಕಾರರು ತಡೆದಿದ್ದು, ಢಾಕಾದಲ್ಲಿರುವ ಬೆಂಗಾಳಿ ಸಂಸ್ಕೃತಿಗೆ ಸಮರ್ಪಿತ ಕೇಂದ್ರವಾದ ಛಾಯನಾಟ್ ಮೇಲೂ ದಾಳಿ ನಡೆಸಿದ್ದಾರೆಂದು ತಿಳಇದುಬಂದಿದೆ.

ಉಸ್ಮಾನ್ ಹಾದಿ ಸಾವು ಕುರಿತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಪ್ರತಿಕ್ರಿಯೆ ನೀಡಿದ್ದು, ಹಾದಿ ಸಾವು ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಭಯ, ಭೀತಿ ಅಥವಾ ರಕ್ತಪಾತದ ಮೂಲಕ ಪ್ರಜಾಪ್ರಭುತ್ವದ ಪಯಣವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ದಾಳಿ ಚುನಾವಣೆ ಹಾಳುಮಾಡುವ ಉದ್ದೇಶದಿಂದ ಕೂಡಿರುವ ಪೂರ್ವನಿಯೋಜಿತ ಕೃತ್ಯ ಎಂದೂ ಆರೋಪಿಸಿದ್ದಾರೆ.

ಸಿಂಗಾಪುರದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ್ದು, ವೈದ್ಯರ ಅತ್ಯುತ್ತಮ ಪ್ರಯತ್ನಗಳ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಉಸ್ಮಾನ್ ಹಾದಿ ಮೃತಪಟ್ಟಿದ್ದಾರೆ, ಮೃತದೇಹವನ್ನು ಬಾಂಗ್ಲಾದೇಶಕ್ಕೆ ಮರಳಿಸಲು ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಈ ನಡುವೆ ಬಾಂಗ್ಲಾದೇಶ ಸರ್ಕಾರ ಶುಕ್ರವಾರ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಆಯೋಜಿಸುವುದಾಗಿ ಮತ್ತು ಶನಿವಾರ ಅರ್ಧ ದಿನದ ಶೋಕಾಚರಣೆ ನಡೆಸುವುದಾಗಿ ಘೋಷಿಸಿದೆ.

ಗುಂಡಿನ ದಾಳಿ ನಡೆಸಿದವರಿಗಾಗಿ ಶೋಧ

ಏತನ್ಮಧ್ಯೆ ಉಸ್ಮಾನ್ ಹಾದಿ ಮೇಲಿನ ಗುಂಡಿನ ದಾಳಿ ನಡೆಸಿದ ಆರೋಪಿಗಳಿಗಾಗಿ ಬಾಂಗ್ಲಾದೇಶ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದು, ಇಬ್ಬರು ಪ್ರಮುಖ ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ 50 ಲಕ್ಷ ಟಾಕಾ (ಸುಮಾರು 42 ಸಾವಿರ ಡಾಲರ್) ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

2024ರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ 222 ಸ್ಥಾನಗಳನ್ನು ಗೆದ್ದಿದ್ದರೂ, ವಿರೋಧ ಪಕ್ಷಗಳು ಅದನ್ನು ನಕಲಿ ಚುನಾವಣೆ ಎಂದು ಆರೋಪಿಸಿದ್ದವು. ಮುಂದಿನ ಚುನಾವಣೆಯಲ್ಲಿ ಖಾಲಿದಾ ಜಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಗೆಲುವಿನ ನಿರೀಕ್ಷೆಯಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ: ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

Epstein Files ಬಿಡುಗಡೆ: ಟ್ರಂಪ್ ಬಗ್ಗೆ ಹೆಚ್ಚಿನದ್ದಿಲ್ಲ; ಕ್ಲಿಂಟನ್ ಫೋಟೋಗಳು ಬಹಿರಂಗ!

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಸಿಗದ ನಿರೀಕ್ಷಣಾ ಜಾಮೀನು: ಅಜ್ಞಾತ ಸ್ಥಳಕ್ಕೆ ತೆರಳಿದ ಬಿಜೆಪಿ ಶಾಸಕ ಭೈರತಿ ಬಸವರಾಜು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾತ್ರೋರಾತ್ರಿ ಶೋಧ; ಇತಿಹಾಸದಲ್ಲಿಯೇ ಮೊದಲ ಬಾರಿಗೆ 30 ಮೊಬೈಲ್ ಫೋನ್‌ಗಳು ವಶ!

SCROLL FOR NEXT